ಬೆಂಗಳೂರು: ಪದ್ಮಶ್ರೀಪುರಸ್ಕೃತೆ ಸಾಲುಮರದ ತಿಮ್ಮಕ್ಕ (೧೧೪) ಇಂದು ವಿಧಿವಶರಾಗಿದ್ದಾರೆ. ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗಾಗಿ ತಿಮ್ಮಕ್ಕ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಇಂದು ಕೊನೆಯುಸಿರೆಳೆದಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ೧೯೧೧ರ ಜೂನ್ ೩೦ರಂದು ಜನಿಸಿದ್ದ ಸಾಲುಮರದ ತಿಮ್ಮಕ್ಕ, ಹುಲಿಕಲ್ ಗ್ರಾಮದ ಚಿಕ್ಕಯ್ಯರನ್ನು ವಿವಾಹವಾಗಿದ್ದರು. ಆದರೆ ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ್ದರು. ಸಾಲು ಮರದ ತಿಮ್ಮಕ್ಕೆ ಎಂದೇ ಪ್ರಸಿದ್ಧರಾಗಿದ್ದ ಇವರಿಗೆ ೨೦೧೯ರಲ್ಲಿ ಪದ್ಮಶ್ರೀ ಲಭಿಸಿತ್ತು.
ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ತಿಮ್ಮಕ್ಕ ಅವರ ಮಹತ್ತರ ಸಾಧನೆಗೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ರಾಜ್ಯೋತ್ಸವ ಪ್ರಶಸ್ತಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ, ೨೦೧೦ನೇ ಸಾಲಿನ ಪ್ರತಿಷ್ಠಿತ `ನಾಡೋಜ’ ಪ್ರಶಸ್ತಿ ಸೇರಿ ೨೦೧೯ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ೨೦೨೦ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ತಿಮ್ಮಕ್ಕನವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.



