ಬೆಂಗಳೂರು: ಕನ್ನಡ ಶಾಲೆಗಳು ಉಳಿಯಬೇಕು. ಕನ್ನಡ ಅನ್ನದ ಭಾಷೆಯಾಗಬೇಕು ಎನ್ನುವುದು ಕನ್ನಡಿಗರ ಮೂಲ ಬೇಡಿಕೆಯಾಗಿದೆ. ಇದುವರೆಗೆ ಕನ್ನಡಿಗರಿಗೆ, ಕನ್ನಡ ಭಾಷೆ, ಕನ್ನಡ ಶಾಲೆಗಳ ಉಳಿವಿಗೆ ನಡೆಸಿದ ನ್ಯಾಯಯುತ ಹೋರಾಟಕ್ಕ ಜಯ ಎನ್ನುವುದು ಮರೀಚಿಕೆಯಾಗಿದೆ.
ಹಾಗಂದು ರಾಜ್ಯದಲ್ಲಿ ಕನ್ನಡ ಉಳಿಯ ಬೇಕು, ಕನ್ನಡ ಬೆಳೆಯಬೇಕು ಎನ್ನುವ ದೀಕ್ಷೆ ತೊಟ್ಟ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಶಾಲೆಗಳನ್ನು ಉಳಿಸುವುದಕ್ಕೆ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಇದಕ್ಕೆ ಸಮಸ್ತ ಕನ್ನಡಿಗರ ಒಪ್ಪಿಗೆ ಸಿಕ್ಕದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದರು.
ಕನ್ನಡ ಶಾಲೆಗಳನ್ನು ಉಳಿಸಿ, ಕನ್ನಡವನ್ನು ಬೆಳೆಸುವ ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶ ಈಡೇರಿಕೆಗಾಗಿ, ಮುಂದಿನ ಸೂಕ್ತ ಕ್ರಮಕೈಗೊಳ್ಳುವುದರ ಬಗ್ಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ಪಡೆದುಕೊಳ್ಳುವ ನಿಟ್ಟಿನಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಉನ್ನತ ಮಟ್ಟದ `ಚಿಂತನಾ ಸಭೆ’ಯ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಭಾರತ ಎದುರಿಸುವ ಹತ್ತಾರು ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ. ಆದರೆ ಕನ್ನಡ ಶಾಲೆಗಳ ಸ್ಥಿತಿ ಕಂಡಾಗ ದು:ಖವಾಗುತ್ತದೆ. ಕನ್ನಡ ಶಾಲೆಗಳ ಉಳಿವಿಗೆ ಪರಿಷತ್ತು ನಡೆಸುವ ನ್ಯಾಯಾಂಗ ಹೋರಾಟಕ್ಕೆ ಸಮಸ್ತ ಕನ್ನಡಿಗರ ಬೆಂಬಲ ಸಿಕ್ಕಿರುವುದು ನಮಗೆ ಆನೆ ಬಲ ಬಂದಂತಾಗಿದೆ ಎಂದು ನಾಡೋಜ ಡಾ. ಮಹೇಶ್ ಜೋಶಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ಕನ್ನಡ ಶಾಲೆಗಳನ್ನು ಉಳಿಸಿ, ಕನ್ನಡವನ್ನು ಬೆಳೆಸುವ `ಚಿಂತನಾ ಸಭೆಯ ನೇತ್ರತ್ವವಹಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ನ್ಯಾ. ಶ್ರೀ ಅರಳಿ ನಾಗರಾಜ್ ಮಾತನಾಡಿ, ಸರ್ಕಾರಗಳು ನ್ಯಾಯಾಂಗಕ್ಕೆ ಅಂಜುತ್ತದೆ, ಆದ್ದರಿಂದ ಕನ್ನಡ ಶಾಲೆ ಉಳಿಸಿ ಬೆಳಸಲು ಅರ್ಜಿ ಸಲ್ಲಿಸಲು ಹಿರಿಯ ವಕೀಲರ ಜೊತೆ ಚರ್ಚಿಸಬೇಕಿದೆ. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸಮಾನ ಅವಕಾಶ ಸಿಗುವಂತೆ ನೋಡಿಕೊಳ್ಳಲು ನಾವು ಸರ್ಕಾರಕ್ಕೆ ವಿನಂತಿಸಬೇಕು. ಪೋಷಕರಲ್ಲಿ ಮಕ್ಕಳನ್ನು ಸರಕಾರಿ ಕನ್ನಡ ಶಾಲೆಗಳಲ್ಲಿ ಕಳಿಸಲು ಮನವಿ ಮಾಡಬೇಕು.
ನಾನು ಕೂಡ ಕನ್ನಡ ಮಾಧ್ಯಮದಲ್ಲಿ ಓದಿಯೇ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶನಾಗಿ ಕಾರ್ಯನಿರ್ವಹಿಸಿದೆ ಅದೇ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೆ ಇಷ್ಟು ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಜಿ. ಎಸ್. ಸಿದ್ದಲಿಂಗಯ್ಯ ಅವರು ಮಾತನಾಡಿ ಈಗ ಅಧಿಕಾರದಲ್ಲಿ ಇದ್ದ ಮುಖ್ಯಮಂತ್ರಿ ಸಿದ್ದರಾಮ ಯ್ಯನವರು ಹಿಂದೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರು. ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಾಳತ್ವದಲ್ಲಿ ತಜ್ಞರ ಒಂದು ನಿಯೋಗದೊಂದಿಗೆ ಕನ್ನಡ ಶಾಲೆಗಳ ಉಳಿವಿಗೆ ಸರಕಾರ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರು ಮಾತನಾಡಿ, ಪ್ರತಿ ಜಿಲ್ಲೆಗೊಂದು ಮಾದರಿ ಕನ್ನಡ ಮಾಧ್ಯಮದ ಶಾಲೆಗಳನ್ನು ಆರಂಭಿಸಬೇಕು. ಕನ್ನಡದಲ್ಲಿ ಕಲಿತರೆ ಮಕ್ಕಳ ಮನಸ್ಸಿಗೆ ಮುಟ್ಟುತ್ತದೆ ಎನ್ನುವ ಸಂಗತಿಯನ್ನು ಬಹುತೇಕರು ಮರೆತು ಬಿಟ್ಟಿದ್ದಾರೆ. ಸರಕಾರ ಶಾಲೆಗಳ ಅಭಿವೃದ್ಧಿಗೆ ಯೋಜನಾ ಬದ್ಧ ರೂಪರೇಶ ಹಾಕಿಕೊಳ್ಳಬೇಕು. ಕನ್ನಡ ಭಾಷೆಯಲ್ಲಿ ಕಲಿತ ಮಕ್ಕಳಿಗೆ ಸಾಕಷ್ಟು ಅವಕಾಶಗಳು ಸಿಗುವಂತ್ತಾಗಬೇಕು ಅಂದಾಗ ಮಾತ್ರ ಪೋಷಕರು ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸುತ್ತಾರೆ ಎಂದು ಹೇಳಿದರು.
ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಮಾತನಾಡಿ, ಯಾವ ಸರ್ಕಾರಕ್ಕೂ ಭಾಷೆ, ಸಂಸ್ಕೃತಿ, ಶಿಕ್ಷಣದ ಬಗ್ಗೆ ಕಾಳಜಿಯೇ ಇಲ್ಲ. ಸರಕಾರ ಸಮಸ್ಯಗಳ ಕುರಿತು ವರ್ಷಕ್ಕೊಂದು ಸಬೆ ನಡೆಸಿ ನಿರ್ಣಯಗಳನ್ನು ಕೈಗೊಳ್ಳುತ್ತದೆ. ಆ ಎಲ್ಲ ನಿರ್ಣಯಗಳು ಕಡತಕ್ಕೆ ಸೇರುವುದು ಬಿಟ್ಟರೆ ಕಾರ್ಯಗತವಾಗುವುದಿಲ್ಲ. ಕನ್ನಡದ ಮಾತನಾಡುವುದು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ನಮ್ಮ ಮಕ್ಕಳಿಗೆ ಕನ್ನಡ ಕಲಿಸಿ ಇಂಗ್ಲಿಷ ಶಾಲೆಯಲ್ಲಿರುವ ಸೌಲತ್ತುಗಳನ್ನು ನೀಡಿ ಎಂದು ಹೋರಾಟ ಮಾಡುವ ಅನಿವಾರ್ಯತೆ ಬಂದಿದೆ. ಕನ್ನಡ ಭಾಷೆಗಾಗಿ ಅವಶ್ಯಕತೆ ಬಿದ್ದರೆ ನಾನು ಆಮರಣಾಂತ ಉಪವಾಸ ಮಾಡಲು ಸಿದ್ದ ಎಂದು ಎಚ್ಚರಿಸಿದರು.
ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ಕನ್ನಡ ಉಳಿಸುವುದಕ್ಕೆ ವಿಧಾನ ಸೌಧ ಸುತ್ತಿದರೆ ಸಾಲದು. ಮುಖ್ಯವಾಗಿ ಕನ್ನಡ ಶಾಲೆಗಳ ಉಳಿವಿಗೆ ಆರ್ಥಿಕ ಬೆಂಬಲ ಬೇಕಾಗಿದೆ. ಮುಂದಿನ ಬಜೆಟ್ನಲ್ಲಿ ಕನ್ನಡ ಶಾಲೆಗಳಿಗಾಗಿಯೇ ಪ್ರತ್ಯೇಕ ಆಯವ್ಯಯ ಮಂಡಿಸಬೇಕು. ಮಹಿಳೆಯರಿಗೆ ಉಚಿತ ಬಸ್ ನೀಡುವುದಕ್ಕಿಂತ ಶಾಲಾ ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆಯಾಗಬೇಕು ಎನ್ನುವ ಮಾತನ್ನು ಹೇಳಿದರು. ಹಿರಿಯ ಸಾಹಿತಿ ಡಾ. ದೊಡ್ಡರಂಗೆಗೌಡರು ಮಾತನಾಡಿ, ಯಾವ ಸರ್ಕಾರಕ್ಕೂ ಕನ್ನಡ ಅದ್ಯತೆಯಾಗಿ ಉಳಿದಿಲ್ಲ. ಆಡಳಿತಕ್ಕೆ ಬೇಡದ ಮೇಲೆ ಇನ್ನಾರಿಗೆ ಬೇಕಾಗಿದೆ ಕನ್ನಡ ಎನ್ನುವ ಸ್ಥಿತಿಗೆ ನಾವು ಬಂದಿದ್ದೇವೆ.
ಪೋಷಕರು ತಮ್ಮಮಕ್ಕಳ ಭವಿಷ್ಯವನ್ನು ನೋಡುತ್ತಾರೆ. ಅದಕ್ಕಾಗಿಯೇ ಆಂಗ್ಲ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ತಮ್ಮ ಸೂತ್ತಮುತ್ತಲಿನಲ್ಲಿ ಕನ್ನಡ ಶಾಲೆಗಳಿದ್ದರೂ ಮಕ್ಕಳನ್ನು ಕಳಿಸದ ಪರಸ್ಥಿತಿ ಬಂದು ಬಿಟ್ಟಿದೆ. ಅದಕ್ಕೆ ಕನ್ನಡ ಶಾಲೆಗಳನ್ನು ಮಾದರಿ ಶಾಲೆಯಾಗಿ ಮಾಡುವುದೊಂದೆ ಇದ್ದಕ್ಕೆ ಪರಿಹಾರವಾಗಿದೆ ಎಂದು ತಿಳಿಸಿದರು.ಹಿರಿಯ ಲೇಖಕ ಪ್ರಧಾನ ಗುರುದತ್ತ , ಬೇಲಿಮಠದ ಶಿವರುದ್ರ ಮಹಾಸ್ವಾಮೀಜಿ, ಕನ್ನಡ ಹೋರಾಟಗಾರ ಬೀದರ್ನ ಶ್ರೀ ರೇವಣ ಸಿದ್ದಪ್ಪ ಜಲಾದಿ, ಮಾಜಿ ಜಿಲ್ಲಾ ನ್ಯಾಯಾಧೀಶರಾದ ಬಿ. ಶಿವಲಿಂಗೇಗೌಡ, ಕನ್ನಡ ಹೋರಾಟಗಾರ್ತಿ ಕೆ. ಶರಿಫಾ ಮಾತನಾಡಿದರು.