ಹೈದರಾಬಾದ್: ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ವಿಕೆಟ್ ಪಡೆದ ಕೆವಿನ್ ಸಿಂಕ್ಲೇರ್ ಕಾರ್ಟ್ವೀಲ್ ಬ್ಯಾಕ್-ಫ್ಲಿಪ್ ಮಾಡಿ ಸಂಭ್ರಮಿಸಿದ್ದರು. ಈ ವಿಭಿನ್ನ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೆಸ್ಟ್ ಇಂಡೀಸ್ ಆಟಗಾರ ಕೆವಿನ್ ಸಿಂಕ್ಲೇರ್ ಟೆಸ್ಟ್ ಕ್ರಿಕೆಟ್ನಲ್ಲಿ ವಿಕೆಟ್ ಖಾತೆ ತೆರೆದಿದ್ದಾರೆ. ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ವಿಕೆಟ್ ಸಿಗುತ್ತಿದ್ದಂತೆ ಕೆವಿನ್ ಅತ್ಯಾಕರ್ಷಕವಾಗಿ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಹೊನಲು ಬೆಳಕಿನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಮೊದಲ ಇನಿಂಗ್ಸ್ನಲ್ಲಿ 311 ರನ್ ಪೇರಿಸಿ ವೆಸ್ಟ್ ಇಂಡೀಸ್ ತಂಡ ಆಲೌಟ್ ಆಗಿದೆ.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಉಸ್ಮಾನ್ ಖ್ವಾಜಾ ಉತ್ತಮ ಆರಂಭ ಒದಗಿಸಿದ್ದರು. ಒಂದೆಡೆ ಸ್ಟೀವ್ ಸ್ಮಿತ್ (6) ಹಾಗೂ ಮಾರ್ನಸ್ ಲಾಬುಶೇನ್ (3) ವಿಕೆಟ್ ಒಪ್ಪಿಸಿದರೂ, ಮತ್ತೊಂದೆಡೆ ಖ್ವಾಜಾ ರಕ್ಷಣಾತ್ಮಕ ಆಟದೊಂದಿಗೆ ಗಮನ ಸೆಳೆದರು.
131 ಎಸೆತಗಳನ್ನು ಎದುರಿಸಿದ ಉಸ್ಮಾನ್ ಖ್ವಾಜಾ 10 ಫೋರ್ಗಳೊಂದಿಗೆ 75 ರನ್ ಬಾರಿಸಿದ್ದರು. ಈ ವೇಳೆ ದಾಳಿಗಿಳಿದ ಸ್ಪಿನ್ನರ್ ಕೆವಿನ್ ಸಿಂಕ್ಲೇರ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಖ್ವಾಜಾ ಸ್ಲಿಪ್ನಲ್ಲಿ ಕ್ಯಾಚಿತ್ತು ಹೊರ ನಡೆದರು.ಈ ವಿಕೆಟ್ ಸಿಗುತ್ತಿದ್ದಂತೆ ಕೆವಿನ್ ಸಿಂಕ್ಲೇರ್ ಕಾರ್ಟ್ವೀಲ್ ಬ್ಯಾಕ್-ಫ್ಲಿಪ್ ಮಾಡಿ ಸಂಭ್ರಮಿಸಿದ್ದರು.
ಈ ಅತ್ಯಾಕರ್ಷಕ ಸಂಭ್ರಮಕ್ಕೆ ಬ್ರಿಸ್ಬೇನ್ ಪ್ರೇಕ್ಷಕರು ಕೂಡ ತಲೆದೂಗಿದರು. ಇದೀಗ ಕೆವಿನ್ ಸಿಂಕ್ಲೇರ್ ಅವರ ಬ್ಯಾಕ್-ಫ್ಲಿಪ್ ಸೆಲೆಬ್ರೇಷನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಸಿಕ್ಕಾಪಟ್ಟೆ ವೈರಲ್ ಆಗಿದೆ.