ಬೆಂಗಳೂರು: ಐಪಿಎಲ್ 2024 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು. ಆದರೆ ಕಪ್ ಗೆಲ್ಲದೇ ಹೋದರೆ ಈ ಸಲ ಆರೆಂಜ್ ಕ್ಯಾಪ್ ಮಾತ್ರ ನಮ್ದೇ ಎನ್ನಬಹುದು.ಈ ಐಪಿಎಲ್ ನಲ್ಲಿ ಇನ್ನು ಫೈನಲ್ ಪಂದ್ಯ ಮಾತ್ರ ಬಾಕಿಯಿದೆ.
ಇದುವರೆಗೆ ಲೀಡಿಂಗ್ ರನ್ ಸ್ಕೋರರ್ ಆಗಿ ಕೊಹ್ಲಿ ಆರೆಂಜ್ ಕ್ಯಾಪ್ ಗೌರವ ಪಡೆದಿದ್ದಾರೆ. ಈಗಾಗಲೇ ಆರೆಂಜ್ ಕ್ಯಾಪ್ ರೇಸ್ ನಲ್ಲಿದ್ದವರೆಲ್ಲಾ ಟೂರ್ನಿಯಿಂದ ಹೊರಹೋಗಿ ಆಗಿದೆ. ಹೀಗಾಗಿ ಈ ಬಾರಿ ಆರೆಂಜ್ ಕ್ಯಾಪ್ ನಮ್ದೇ ಎಂದು ಆರ್ ಸಿಬಿ ಹೆಮ್ಮೆ ಪಡಬಹುದು.ಕೊಹ್ಲಿ ಈ ಐಪಿಎಲ್ ನಲ್ಲಿ 15 ಇನಿಂಗ್ಸ್ ಆಡಿದ್ದಾರೆ. ಈ ಪೈಕಿ 1 ಶತಕ, 5 ಅರ್ಧಶತಕಗಳೊಂದಿಗೆ 741 ರನ್ ಗಳಿಸಿದ್ದಾರೆ.
ಆ ಮೂಲಕ ಆರೆಂಜ್ ಕ್ಯಾಪ್ ಕೊಹ್ಲಿ ಬಳಿಯೇ ಉಳಿಯುವ ಸಾಧ್ಯತೆಯಿದೆ. ಆರೆಂಜ್ ಕ್ಯಾಪ್ ರೇಸ್ ನಲ್ಲಿ ಕೊಹ್ಲಿ ಹಿಂದೆ ರಾಜಸ್ಥಾನ್ ತಂಡದ ರಿಯಾನ್ ಪರಾಗ್ ಮತ್ತು ಹೈದರಾಬಾದ್ ತಂಡ ಟ್ರಾವಿಸ್ ಹೆಡ್ ಇದ್ದರು. ಈ ಪೈಕಿ ರಾಜಸ್ಥಾನ್ ತಂಡ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಪರಾಗ್ ರೇಸ್ ನಿಂದ ಹೊರಹೋಗಿದ್ದಾರೆ.
ಇದೀಗ ಉಳಿದಿರುವುದು 567 ರನ್ ಕಲೆ ಹಾಕಿರುವ ಟ್ರಾವಿಸ್ ಹೆಡ್. ಆದರೆ ಕೊಹ್ಲಿಯನ್ನು ಹಿಂದಿಕ್ಕಲು ಟ್ರಾವಿಸ್ ಹೆಡ್ ಇನ್ನೂ 175 ರನ್ ಗಳಿಸಬೇಕು. ಒಂದೇ ಪಂದ್ಯದಲ್ಲಿ ಅದೂ ಟಿ20 ಕ್ರಿಕೆಟ್ ನಲ್ಲಿ ಇಷ್ಟು ರನ್ ಗಳಿಸುವುದು ಸುಲಭವಲ್ಲ. ಹೀಗಾಗಿ ಬಹುತೇಕ ಕೊಹ್ಲಿಯೇ ಈ ಬಾರಿಯ ಆರೆಂಜ್ ಕ್ಯಾಪ್ ಹೋಲ್ಡರ್ ಆಗಲಿದ್ದಾರೆ.