ಕನ್ನಡದ ಮೊದಲ ರಾಮಾಯಣ ಕಾವ್ಯ ತೊರವೆ ರಾಮಾಯಣವಾಗಿದೆ. ತೊರವೆ ರಾಮಾಯಣವನ್ನು ಬರೆದವರು ಕುಮಾರ ವಾಲ್ಮೀಕಿ. ಕುಮಾರ ವಾಲ್ಮೀಕಿಯ ಹೆಸರು ನರಹರಿ ಎಂಬುದಾಗಿದೆ. ನಡುಗನ್ನಡ ಸಾಹಿತ್ಯದ ಪ್ರಮುಖ ಕಾವ್ಯವಾದ ತೊರವೆ ರಾಮಾಯಣವು ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ.
ವಿಜಯಪುರದ ತೊರವೆ ಕ್ಷೇತ್ರದ ನರಸಿಂಹದೇವರ ಸನ್ನಿಧಾನದಲ್ಲಿ ನರಸಿಂಹ ಎಂಬ ಅಂಕಿತದಲ್ಲಿಯೇ ರಾಮಾಯಣವನ್ನು ದೇವರ ಸನ್ನಿಧಾನದಲ್ಲಿ ರಚಿಸಿದ್ದಾನೆ. ಕುಮಾರ ವಾಲ್ಮೀಕಿಗೆ “ಕವಿರಾಜಹಂಸ” ಎಂಬ ಬಿರುದು ಕೂಡ ಇತ್ತು. 15ನೇ ಶತಮಾನದ ಸಮಯದಲ್ಲಿ ಇದ್ದ ಕವಿ ತೊರವೆ ರಾಮಾಯಣ ಮತ್ತು ಐರಾವಣ ಕಾಳಗ ಎಂಬ ಕೃತಿಯನ್ನು ಕೂಡ ರಚಿಸಿದ್ದಾನೆ.
ವಾಲ್ಮೀಕಿ ರಾಮಾಯಣವನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದ ಕೀರ್ತಿ ಕುಮಾರ ವಾಲ್ಮೀಕಿಯದ್ದು, ಕುಮಾರ ವಾಲ್ಮೀಕಿಗೆ ಕುಮಾರ ವ್ಯಾಸ ಭಾರತ ಪ್ರೇರಣೆಯಾಗಿ ಗದುಗಿನ ನಾರಣಪ್ಪನ ಶೈಲಿಯಲ್ಲಿಯೇ ಕೃತಿಯ ರಚನೆಯನ್ನು ಭಾಮಿನಿ ಷಟ್ಪದಿಲ್ಲಿ ಮಾಡಿ ರಾಮಾವತಾರದ ಮಹತ್ವವನ್ನು ಹಾಗೂ ರಾಮಭಕ್ತಿಯ ಅಲೆಗಳನ್ನು ಬಿತ್ತುವ ಉದ್ದೇಶದಿಂದ ಸರಳ ಸುಲಲಿತ ಕಾವ್ಯವನ್ನು ರಚಿಸಿದ್ದಾನೆ. ವಿವಾದಿತ ಘಟನೆಗಳ ಬಗೆಗೆ ಹೆಚ್ಚಿನ ವಿಚಾರ ಮಾಡದೇ ದೇವರಾದ ರಾಮನು ದೋಷ ರಹಿತನೆಂದೇ ನಿರೂಪಣೆ ಮಾಡುತ್ತಾ ಹೋಗುತ್ತಾನೆ.
ಮೂಲ ಕಥೆಯ ಘಟನೆಗಳಲ್ಲಿ ಅಗತ್ಯವಾದಲ್ಲಿ ಹಿಗ್ಗಿಸಿ, ಬೇಡವೆನಿಸಿದ ಕಡೆಗೆ ಕಡಿಮೆ ಮಾಡಿ, ಸುಂದರವಾದ ಕಔಯದ ರಚನೆಯನ್ನು ಮಾಡಿದ್ದಾನೆ. ತೊರವೆ ರಾಮಾಯಣದಲ್ಲಿ 112 ಸಂಧಿಗಳು ಅಲಂಕಾರಗಳನ್ನು 5079 ಶ್ಲೋಕಗಳಲ್ಲಿ ರಚಿಸಿದ್ದಾನೆ. ಒಟ್ಟು ಆರು ಕಾಂಡಗಳಿದ್ದು ಮಿಕ್ಕ 5 ಕಾಂಡಗಳಿಗಿಂತ ಯುದ್ಧಕಾಂಡವು ವಿಸ್ತಾರವಾಗಿದೆ. ಕಾವ್ಯದಲ್ಲಿ ಕಾವ್ಯಗುಣಕ್ಕಿಂತ ಭಕ್ತಿಯ ಪರವಶತೆ ಹೆಚ್ಚಾಗಿ ಎದ್ದು ಕಾಣುತ್ತದೆ.
ಕಾವ್ಯವು ಪಂಡಿತ ರಂಜಕ ಕಾವ್ಯವಾಗಿರದೇ ಸಾಮಾನ್ಯ ಜನರ ಭಕ್ತಿ ಪ್ರದಾನ ಕಾವ್ಯವಾಗಿದೆ. ಕಾವ್ಯದಲ್ಲಿ ಕಥೆಯ ನಿರ್ಗಳ ಓಟ, ಅಚ್ಚುಕಟ್ಟಾದ ನಿರೂಪಣೆ, ಉತ್ತಮ ಭಾಷೆ ಛಂದೋಬದ್ಧ ರಚನೆಗಳು ಬಿಗಿಯಾಗಿದ್ದು ಕುಮಾರ ವ್ಯಾಸ ಹಾಗೂ ಕಾಳಿದಾಸನ ಪ್ರಭಾವಗಳು ಎದ್ದು ಕಾಣುತ್ತದೆ. ರಾಮಾಯಣದ ಎಲ್ಲ ಪಾತ್ರಗಳೂ ಕೂಡ ಸೂತ್ರಧಾರನಾದ ರಾಮನ ಕೈಯಲ್ಲಿ ಅವನು ಬಯಸಿದಂತೆ ನಡೆಯುತ್ತವೆ ಎಂಬುದನ್ನು ಚಿತ್ರಿಸಿದ್ದಾನೆ.
ಇಲ್ಲಿ ಮಂಥರೆಯು ಮಾಯೆಯ ಪ್ರತೀಕವಾಗಿದ್ದು ಅವಳ ಮೂಲ ಉದ್ದೇಶ ರಾವಣನ ವಧೆಯಾಗಿರುತ್ತದೆ ಎಂದು ಹೇಳುತ್ತಾನೆ. ತೊರವೆ ರಾಮಾಯಣದಲ್ಲಿ ರಾಕ್ಷಸರಾದ ಕುಂಭಕರ್ಣ, ಅತಿಕಾಯ ಹಾಗೂ ಇಂದ್ರಜೀತ್ ಮೊದಲಾದವರೂ ಕೂಡ ರಾಮನ ಭಕ್ತರಾಗಿಯೇ ಚಿತ್ರಿತಗೊಂಡಿದ್ದಾರೆ. ರಾವಣನು ವಧೆಯಾದ ನಂತರ ಮೋಕ್ಷವನ್ನು ಹೊಂದುತ್ತಾನೆ ಎಂದು ಹೇಳುತ್ತಾರೆ. ಆನಂದ ರಾಮಾಯಣ ಮತ್ತು ಅಧ್ಯಾತ್ಮ ರಾಮಾಯಣದ ಪ್ರಭಾವದಿಂದ ಎಲ್ಲ ಆತ್ಮಗಳ ಶುದ್ಧೀಕರಣವನ್ನು ಪಾತ್ರಗಳಲ್ಲಿ ಕಾಣಬಹುದಾಗಿದೆ. ಅತ್ಯುತ್ತಮವಾಗಿ ಬಂದ ಕಾವ್ಯವು ನಡುಗನ್ನಡ ಸಾಹಿತ್ಯದ ಪ್ರಮುಖ ರಚನೆಗಳಲ್ಲಿ ಒಂದಾಗಿದೆ.
ಮಾಧುರಿ ದೇಶಪಾಂಡೆ ಬೆಂಗಳೂರು