ಟಿ. ನರಸೀಪುರ: ನಾಡಿನಾದ್ಯಂತ ಚಂದ್ರಮಾನ ಯುಗಾದಿಯ ಸಡಗರ ಮನೆ ಮಾಡಿದ್ದು, ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡುವ ಮೂಲಕ ಹೊಸ ವರ್ಷವನ್ನು ಭಕ್ತಿಭಾವದಿಂದ ಸ್ವಾಗತಿಸಿದರು.ಕಾಶಿಗಿಂತಲೂ ಒಂದು ಗುಲಗಂಜಿ ಗಾತ್ರ ಹೆಚ್ಚು ಪಾವಿತ್ರತೆ ಹೆಚ್ಚು ಹೊಂದಿರುವ ಧಾರ್ಮಿಕ ಕ್ಷೇತ್ರ “ಕಾಶಿಗೆ ಹೋದರೆ ಮುಕ್ತಿ, ನರಸೀಪುರವನ್ನು ನೋಡಿದರೆ ಮುಕ್ತಿ” ಎಂಬ ಪ್ರತೀತಿಯಂತೆ, ಈ ಪುಣ್ಯಕ್ಷೇತ್ರವು ಕಾಶಿಗಿಂತಲೂ ಒಂದು ‘ಗುಲಗಂಜಿ’ ಗಾತ್ರದಷ್ಟು ಹೆಚ್ಚು ಪಾವಿತ್ರ್ಯತೆಯನ್ನು ಹೊಂದಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ಹಬ್ಬದ ಅಂಗವಾಗಿ ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಲಕ್ಷಾಂತರ ಭಕ್ತ ಸಾಗರವೇ ಹರಿದುಬಂದಿತ್ತು.ಯುಗಾದಿಯ ಈ ಸುದಿನದಂದು ಟಿ. ನರಸೀಪುರ ತಾಲ್ಲೂಕಿನ ಸುತ್ತಮುತ್ತಲ ಗ್ರಾಮಸ್ಥರು ತಮ್ಮ ಊರಿನ ಗ್ರಾಮ ದೇವತೆಗಳ ವಿಗ್ರಹಗಳನ್ನು ತ್ರಿವೇಣಿ ಸಂಗಮಕ್ಕೆ ಹೊತ್ತು ತಂದು, ಪವಿತ್ರ ನೀರಿನಲ್ಲಿ ಶುಚಿಗೊಳಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಂಗಲ ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ದೇವತೆಗಳನ್ನು ಮರಳಿ ತಮ್ಮ ಗ್ರಾಮಗಳಿಗೆ ಕರೆದೊಯ್ಯುವ ದೃಶ್ಯ ವೈಭವಯುತವಾಗಿತ್ತು.ವಿಶೇಷವಾಗಿ ಮಳವಳ್ಳಿ ತಾಲ್ಲೂಕಿನ ಬಪ್ಪೇಗೌಡನಪುರ ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನದಲ್ಲಿ
ಪೂಜೆ ಸಲ್ಲಿಸುವ ಸಾವಿರಾರು ಭಕ್ತರು, ಹಿಂದಿನ ರಾತ್ರಿಯೇ ತ್ರಿವೇಣಿ ಸಂಗಮದ ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿ ಮುಂಜಾನೆಯೇ ಕಾವೇರಿ, ಕಪಿಲಾ ಮತ್ತು ಗುಪ್ತಗಾಮಿನಿ ಸ್ಫಟಿಕ ಸರೋವರದ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ವಾಡಿಕೆ ಇದೆ.ಪುಣ್ಯಸ್ನಾನದ ಬಳಿಕ ಭಕ್ತರು ಶ್ರೀ ಮಹಾಲಕ್ಷಿ÷್ಮ ಸಮೇತ ಶ್ರೀ ಗುಂಜ ನರಸಿಂಹ ಸ್ವಾಮಿ ಹಾಗೂ ಅಗಸ್ತೇಶ್ವರ ಸ್ವಾಮಿ ದೇವಾಲಯಗಳಿಗೆ ಸಾವಿರಾರು ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮುಂಜಾನೆಯಿAದಲೇ ದೇಗುಲಗಳ ಮುಂದೆ ಭಕ್ತರ ಸರತಿ ಸಾಲು ಕಂಡುಬಂದಿತು.ಲಕ್ಷಾಂತರ ಜನ ಸೇರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಕಟ್ಟೆಚ್ಚರ ವಹಿಸಲಾಗಿತ್ತು. ಸಂಗಮದ ಆವರಣ ಹಾಗೂ ದೇವಾಲಯಗಳ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿತ್ತು.
ತ್ರಿವೇಣಿ ಸಂಗಮದಲ್ಲಿ ಯುಗಾದಿ ಸಂಭ್ರಮ; ಪುಣ್ಯಸ್ನಾನ ಮಾಡಿ ಪುನೀತರಾದ ಸಾವಿರಾರು ಭಕ್ತರು



