ನವದೆಹಲಿ: ಭಾರತದ ಯುವ ಬಾಕ್ಸರ್ಗಳಾದ ಪಾಯಲ್, ನಿಶಾ ಮತ್ತು ಅಕಾನ್ಶಾ ಅವರು ಅರ್ಮೇನಿಯಾದ ಯೆರವಾನ್ನಲ್ಲಿ ನಡೆಯುತ್ತಿರುವ ಜೂನಿಯರ್ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಭಾರತದ ಮಂಗಳವಾರ ಮುಕ್ತಾಯಗೊಂಡ ಈ ಕೂಟದಲ್ಲಿ ಒಟ್ಟು 17 ಪದಕಗಳನ್ನು ಗೆದ್ದು ಸ್ಫೂರ್ತಿಯುತ ಪ್ರದರ್ಶನ ನೀಡಿತು.
ಭಾರತದ ಯುವ ಪಡೆ ಈ ಕೂಟದಲ್ಲಿ ಮೂರು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಭಾರತ ಮಹಿಳೆಯರ ತಂಡ ಈ ಕೂಟದಲ್ಲಿ ಜಂಟಿ ಎರಡನೇ ಸ್ಥಾನವನ್ನು ಪಡೆಯಿತು.
ಪಾಯಲ್ 48 ಕೆ.ಜಿ ಫೈನಲ್ನಲ್ಲಿ ಅರ್ಮೇನಿಯಾದ ಪೆಟ್ರೊಸಿಯಾನ್ ಹೆಗಿನಿ ಅವರನ್ನು ಸರ್ವಾನುಮತದ ತೀರ್ಪಿನಲ್ಲಿ ಸೋಲಿಸಿ ದೇಶಕ್ಕೆ ಮೊದಲ ಚಿನ್ನ ಗಳಿಸಿಕೊಟ್ಟರು.ಏಷ್ಯನ್ ಯುವ ಚಾಂಪಿಯನ್ನರಾದ ನಿಶಾ ಮತ್ತು ಅಕಾನ್ಶಾ ಅವರ ಯಶಸ್ಸಿನ ಓಟವೂ ಚಿನ್ನ ಗೆಲ್ಲುವವರೆಗೆ ಮುಂದುವರಿಯಿತು. ನಿಶಾ 52 ಕೆ.ಜಿ. ವಿಭಾಗದಲ್ಲಿ ತಜಿಕಿಸ್ತಾನದ ಅಬ್ದುಲ್ಲೊಯೆವಾ ಫರಿನೋಜ್ ಅವರನ್ನು, ಅಕಾನ್ಶಾ 70 ಕೆ.ಜಿ. ವಿಭಾಗದಲ್ಲಿ ರಷ್ಯಾದ ತೈಮಾಝೋವಾ ಎಲಿಜವೆಟಾ ಅವರನ್ನು 5-0 ಅಂತರದಿಂದ ಸೋಲಿಸಿದರು.