ನವದೆಹಲಿ: ದೆಹಲಿಯ ನರೇಲಾ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಆಹಾರ ಸಂಸ್ಕರಣಾ ಘಟಕದಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ. ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು ಆರು ಮಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ತೊಗರಿ ಬೇಳೆ ಅನ್ನು ಗ್ಯಾಸ್ ಬರ್ನರ್ಗಳ ಮೇಲೆ ಹುರಿಯಲಾಗಿದೆ ಮತ್ತು ಪೈಪ್ಲೈನ್ಗಳಲ್ಲಿ ಗ್ಯಾಸ್ ಸೋರಿಕೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರಿಗೆ ಮುಂಜಾನೆ 3.35ಕ್ಕೆ ಕರೆ ಬಂದಿದ್ದು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಬೆಂಕಿಯು ಕಾರ್ಖಾನೆಯನ್ನು ಆವರಿಸಿದ್ದು ಕೆಲವು ಕಾರ್ಮಿಕರು ಹೊಗೆಯಲ್ಲಿ ಸಿಲುಕಿಕೊಂಡಿದ್ದರು. ಹದಿನಾಲ್ಕು ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಟ್ಟಡದ ಒಳಗಿದ್ದ ಒಂಬತ್ತು ಜನರನ್ನು ರಕ್ಷಿಸಿ ನರೇಲಾದ ಎಸ್ಎಚ್ಆರ್ಸಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಈ ಪೈಕಿ ಶ್ಯಾಮ್ (24), ರಾಮ್ ಸಿಂಗ್ (30) ಮತ್ತು ಬೀರ್ಪಾಲ್ (42) ಸೇರಿ ಮೂವರು ಮೃತಪಟ್ಟಿದ್ದಾರೆ. ಇತರರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.