ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ಆರಂಭಗೊಂಡಿರುವ 16ನೇ ವಿಧಾನಸಭೆಯ ವಿಧಾನ ಮಂಡಲಗಳ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಬರ ಪರಿಸ್ಥಿತಿ ಮತ್ತು ರೈತರ ಕಷ್ಟನಷ್ಟಗಳ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚರ್ಚೆಗೆ ಹೆಚ್ಚು ಮಹತ್ವವನ್ನು ನೀಡಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದಾರೆ.
`ಬರಪೀಡಿತ ಪ್ರದೇಶದ ರೈತರಿಗೆ ಎಕರೆಗೆ 25,000 ರೂ. ಪರಿಹಾರ ಕೊಡಬೇಕು. ಪಶುಸಂಗೋಪನೆಯಲ್ಲಿ ತೊಡಗಿರುವ ಹಾಗು ಜಾನುವಾರುಗಳನ್ನು ಹೊಂದಿರುವ ರೈತರಿಗೆ ಪ್ರತಿ ಜಾನುವಾರಿಗೆ 5,000 ರೂ ಪರಿಹಾರ ಕೊಡಬೇಕು. ಬೆಲೆ ಏರಿಕೆ ನೀಗಿಸಿ ಕುಟುಂಬ ನಿರ್ವಹಿಸಲು ಪ್ರತಿ ಕುಟುಂಬಕ್ಕೆ ಉಚಿತ ರೇಷನ್ ಒದಗಿಸಬೇಕು.
ನರೇಗಾ ಅಥವಾ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮೀಣ ಭಾಗದ ಜನರಿಗೆ ಆದಾಯ ವ್ಯವಸ್ಥೆ ಕಲ್ಪಿಸಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ನೋಡಿಕೊಂಡು ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಸುಧಾರಿಸಬೇಕು. ಬರ ಪೀಡಿತ ಪ್ರದೇಶಗಳ ಸರಿಯಾದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಸರ್ವ ಪಕ್ಷಗಳ ನಿಯೋಗ ದೆಹಲಿಗೆ ತೆರಳಿ, ತುರ್ತು ಪರಸ್ಥಿತಿಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ರೈತರಿಗೆ ಬೆಳೆ ವಿಮೆಯ ತುರ್ತು ಪಾವತಿ ಮಾಡಬೇಕು. ಈ ನಿಟ್ಟಿನಲ್ಲಿ ಕಲಾಪದ ವೇಳೆ ತುರ್ತಾಗಿ ಚರ್ಚಿಸಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಚಂದ್ರು ಅವರು ಒತ್ತಾಯಿಸಿದ್ದಾರೆ.
ಈ ಬೇಡಿಕೆಗಳನ್ನು ತುರ್ತಾಗಿ ಚರ್ಚಿಸಿ ಪರಿಹಾರ ಒದಗಿಸದೇ ರೈತರುಗಳು ಆತ್ಮಹತ್ಯೆಯ ದಾರಿಯನ್ನು ಹಿಡಿದರೆ, ಅದಕ್ಕೆ ಜವಾಬ್ದಾರಿ ನಿಮ್ಮ ಸದನ ಹಾಗು ಅದರ ಸದಸ್ಯರಾಗಲಿದ್ದಾರೆ. ಒಂದು ರಾಷ್ಟ್ರೀಯ ಪಕ್ಷವಾಗಿ ಆಮ್ ಆದ್ಮಿ ಪಕ್ಷವು ಸಾಮಾನ್ಯ ಜನರ ಹಕ್ಕುಗಳು ಮತ್ತು ಯೋಗಕ್ಷೇಮಕ್ಕಾಗಿ ಹೋರಾಡಲು ಬದ್ಧವಾಗಿದೆ. ಸದನದಲ್ಲಿ ಸರಿಯಾದ ಸಮಾದಾನ ಸಿಗದಿದ್ದರೆ ಸದನದಾಚೆ ನಾವು ಜನಪರ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಮು.ಚಂದ್ರು ಅವರು ಪತ್ರದ ಮುಖೇನ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ 800 ಕೋಟಿ ರೂ. ಗಳನ್ನು ಕುಡಿಯುವ ನೀರು ಹಾಗೂ ಮೇವು ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡಿ ಕೈ ತೊಳೆದುಕೊಂಡಿದ್ದಾರೆ. ಈ ತುರ್ತು ಪರಸ್ಥಿತಿ ನೀಗಿಸಲು ರಾಜ್ಯದ ಹಣಕಾಸು ನಿರ್ವಹಿಸುವಲ್ಲಾಗಲಿ, ಕೇಂದ್ರದಿಂದ ಹೆಚ್ಚಿನ ಅನುದಾನ ತರುವುದರಲ್ಲಾಗಲಿ ವಿಫಲರಾಗಿದ್ದಾರೆ. ನಮ್ಮ ರಾಜ್ಯದ ಸಂಸದರಿಗಾಗಲಿ, ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿಯ ಕೇಂದ್ರ ಸರ್ಕಾರಕ್ಕಾಗಲಿ ನಮ್ಮ ರೈತರು ಮತ್ತು ಗ್ರಾಮೀಣ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸುವ ಬದ್ಧತೆ ಇದೆಯೇ ಎಂಬ ಪ್ರಶ್ನೆ ಎದ್ದು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.