ಬೆಂಗಳೂರು: ರಾಜ್ಯದಲ್ಲಿ ಘೋಷಣೆಯಾಗಿರುವ ಎರಡು ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಈಗಾಗಲೇ ತನ್ನ ಅಧಿಕೃತ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೂ ಸಹ ಕಾಂಗ್ರೆಸ್ ಪಕ್ಷದಿಂದ ಇನ್ನು ಅಧಿಕೃತ ಅಭ್ಯರ್ಥಿಗಳ ಘೋಷಣೆಯಾಗಿಲ್ಲ.ದಾವಣಗೆರೆ ಕ್ಷೇತ್ರದಲ್ಲಿ ಟಿಕೆಟ್ಗಾಗಿ ದಿವಂಗತ ಶಾಮನೂರು ಶಿವಶಂಕರಪ್ಪ ಕುಟುಂಬ ಹಾಗೂ ಮುಸ್ಲಿಂ ಸಮುದಾಯದವರು ಜಿದ್ದಾಜಿದ್ದಿ ನಡೆಸಿದ್ದಾರೆ. ನಿನ್ನೆ ಶಾಮನೂರು ಕುಟುಂಬದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪುತ್ರ ಸಮರ್ಥ್ ಅವರು ನಾಮಪತ್ರ ಸಲ್ಲಿಸಿರುವುದು ಮುಸ್ಲಿಂ ಸಮುದಾಯದ ಟಿಕೆಟ್ ಆಕಾಂಕ್ಷಿಗಳನ್ನು ಕೆರಳಿಸಿದೆ. ನಿನ್ನೆ ರಾತ್ರಿ ಸಭೆ ಸೇರಿದ್ದ ಟಿಕೆಟ್ ಆಕಾಂಕ್ಷಿಗಳು ತಮಗೆ ಟಿಕೆಟ್ ಬೇಕೆಂದು ಪಕ್ಷದ ವರಿಷ್ಠರ ಮೇಲೆ ತೀವ್ರ ಒತ್ತಡ ಹೇರಲು ತೀರ್ಮಾನಿಸಿದ್ದಾರೆ. ಸಮರ್ಥ್ ನಾಮಪತ್ರ ಸಲ್ಲಿಸಿರುವುದು ತಮಗೆ ಬೇಸರ ಉಂಟುಮಾಡಿದೆ ಎಂದಿರುವ ಮುಖಂಡರು ಒಂದು ಹಂತದಲ್ಲಿ ಇಂದು ನೂರಾರು ಮಂದಿ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ ಎಂದು ಹೇಳಲಾಗಿದೆ. ನಾಮಪತ್ರ ಸಲ್ಲಿಸಿದವರ ಪೈಕಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡಬೇಕಾಗಿ ಮುಖಂಡರಲ್ಲಿ ಬೇಡಿಕೆಯಿಟ್ಟಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ನಾಮಪತ್ರ ಸಲ್ಲಿಸಿರುವವರ ಪೈಕಿ ಯಾರಿಗಾದರೂ ಟಿಕೆಟ್ ಕೊಟ್ಟರೂ ಪಕ್ಷಕ್ಕೆ ದುಡಿಯುತ್ತೇನೆ. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ. ಬಾಗಲಕೋಟೆಯಲ್ಲೂ ಸಹ ದಿವಂಗತ ಹೆಚ್.ವೈ. ಮೇಟಿ ಕುಟುಂಬದವರಿಗೆ ಟಿಕೆಟ್ ಕೊಡಬೇಕು ಎಂದು ನಿರ್ಧಾರ ಮಾಡಲಾಗಿದ್ದರು ಆ ಕುಟುಂಬದಲ್ಲೂ ಸಹ ನಾಲ್ವರ ನಡುವೆ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆದಿದೆ. ಮೇಟಿ ಪುತ್ರರಾದ ಮಲ್ಲಿಕಾರ್ಜುನ, ಉಮೇಶ್ ಹಾಗೂ ಪುತ್ರಿ ಮಹದೇವಿ ನಡುವೆ ಟಿಕೆಟ್ ಪಡೆಯಲೇ ಬೇಕೆಂಬ ಛಲ ಮೂಡಿಸಿದೆ. ಒಬ್ಬರನ್ನು ಸಮಾಧಾನಗೊಳಿಸಿದರೆ ಮತ್ತೊಬ್ಬರು ಟಿಕೆಟ್ಗಾಗಿ ಪಟ್ಟು ಹಿಡಿಯುತ್ತಿದ್ದಾರೆ. ಇತ್ತ ರಾಜ್ಯ ಕಾಂಗ್ರೆಸ್ಪಕ್ಷದ ಮುಖಂಡರಲ್ಲಿಯೂ ಸಹ ಟಿಕೆಟ್ ಇಂತಹವರಿಗೆ ನೀಡಬೇಕೆಂಬ ಒತ್ತಾಯಗಳು ಬರುತ್ತಿವೆ. ಒಟ್ಟಾರೆ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೇ ಮುಖಂಡರು ಇಂದು ಸಂಜೆಯೊಳಗೆ ಸಭೆ ಸೇರಿ ಅಭ್ಯರ್ಥಿಗಳ ಆಯ್ಕೆ ಅಂತಿಮ ಗೊಳಿಸಲಿದ್ದಾರೆ ಎಮದು ಹೇಳಲಾಗಿದೆ.



