ಇಸ್ಲಾಮಾಬಾದ್: ಡೇವಿಸ್ ಕಪ್ ವಿಶ್ವಗುಂಪಿನ ಪಂದ್ಯವಾಡಲು ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಭಾರತ ಡೇವಿಸ್ ಕಪ್ ತಂಡಕ್ಕೆ ದೇಶದ ಗಣ್ಯರಿಗೆ ಒದಗಿಸುವ ರೀತಿಯ ಭದ್ರತೆಯನ್ನೇ ಒದಗಿಸಲಾಗಿದೆ.60 ವರ್ಷಗಳಲ್ಲಿ ಮೊದಲ ಬಾರಿ ಭಾರತ ಟೆನಿಸ್ ತಂಡ ಪಾಕಿಸ್ತಾನಕ್ಕೆ ಭೇಟಿ ನೀಡಿದೆ.
ಐವರು ಆಟಗಾರರು, ಇಬ್ಬರು ಫಿಸಿಯೋಗಳು ಮತ್ತು ಇಬ್ಬರು ಎಐಟಿಎ ಅಧಿಕಾರಿಗಳನ್ನು ಒಳಗೊಂಡ ಭಾರತ ತಂಡ ಭಾನುವಾರ ರಾತ್ರಿ ಇಸ್ಲಾಮಾಬಾದ್ ತಲುಪಿದೆ.ಫೆ.3 ಮತ್ತು 4ರಂದು ಪಂದ್ಯಗಳು ನಡೆಯಲಿದೆ. ಪಂದ್ಯಗಳು ನಡೆಯುವ ಇಸ್ಲಾಮಾಬಾದ್ ಸ್ಪೋರ್ಟ್ ಕ್ಲಾಂಪೆಕ್ಸ್ನಲ್ಲಿ ಬಾಂಬ್ ನಿಷ್ಕ್ರಿಯ ದಳ ನಿತ್ಯ ಬೆಳಿಗ್ಗೆ ತಪಾಸಣೆ ಕೈಗೊಳ್ಳಲಿದೆ.
ಆಟಗಾರರ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು ಅತಿ ಗಣ್ಯರಿಗೆ ನೀಡುವ ಬಹುಸ್ತರ ಭದ್ರತಾ ವ್ಯವಸ್ಥೆ ಜತೆಗೆ ತಂಡ ಪ್ರಯಾಣಿಸುವ ವೇಳೆ ಎರಡು ಬೆಂಗಾವಲು ವಾಹನ ಒದಗಿಸಲಾಗಿದೆ.ಭಾರತ ಡೇವಿಸ್ ಕಪ್ ತಂಡ 1964 ರಲ್ಲಿ ಕೊನೆಯ ಬಾರಿ ಪಾಕಿಸ್ತಾನಕ್ಕೆ ತೆರಳಿತ್ತು. ಆಗ ಭಾರತ 4-0 ಅಂತರದಿಂದ ಜಯಗಳಿಸಿತ್ತು.
’60 ವರ್ಷಗಳ ನಂತರ ಭಾರತ ತಂಡ ಪಾಕಿಸ್ತಾನಕ್ಕೆ ಬಂದಿರುವ ಕಾರಣ ಹೆಚ್ಚುವರಿ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದ್ದೇವೆ. ಭಾರತ ತಂಡಕ್ಕೆ ನಾಲ್ಕರಿಂದ ಐದು ಹಂತಗಳ ಭದ್ರತೆ ಕಲ್ಪಿಸಲಾಗಿದೆ. ಈವೆಂಟ್ ಸೆಕ್ಯುರಿಟಿ ಮ್ಯಾನೇಜರ್ ಆಗಿ ನಾನು ಪ್ರಯಾಣದ ಸಮಯದಲ್ಲಿ ಅವರೊಂದಿಗೆ ಇದ್ದೇನೆ’ ಎಂದು ಪಿಟಿಎಫ್ ಪ್ರಧಾನ ಕಾರ್ಯದರ್ಶಿ ಕರ್ನಲ್ ಗುಲ್ ರೆಹಮಾನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.