ಮೇಲುಕೋಟೆ: ಶ್ರೀನಾರಾಯಣಸ್ವಾಮಿ ಭೂಲೋಕಕ್ಕೆ ಅವಿರ್ಭವಿಸಿದ ಜಯಂತ್ಯುತ್ಸವ ಪವಿತ್ರ ದಿನವಾದ ಮೀನ-ಚೈತ್ರ ಮಾಸದ ಹಸ್ತನಕ್ಷತ್ರದ ಶುಭದಿನವಾದ ಗುರುವಾರ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ತೀರ್ಥಸ್ನಾನ ಮಹೋತ್ಸವ ಶ್ರದ್ಧಾಭಕ್ತಿಂದ ನೆರವೇರಿತು.
ಕಲ್ಯಾಣಿಯ ನಾಲ್ಕು ಕಡೆಯ ಸೋಪಾನಗಳು, ಸಾಲುಮಂಟಪಗಳ ಮೇಲ್ಬಾಗ ಧಾರಾಮಂಟಪಗಳ ಮೇಲೆ ಕಳೆದೆಲ್ಲ ಸಲಕ್ಕಿಂತ ಕಿಕ್ಕಿರಿದು ತುಂಬಿದ್ದ ಐವತ್ತುಸಾವಿರಕ್ಕೂ ಹೆಚ್ಚಿದ್ದ ಭಕ್ತರ ಜಯಘೋಷಗಳ ನಡುವೆ ಸ್ನಪನಶೆಲ್ವರಿಗೆ ಭಕ್ತರ ಇಷ್ಠಾರ್ಥ ಈಡೇರಿಕೆ, ನಾಡಿನ ಸುಭೀಕ್ಷತೆ, ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಮಂಗಳವಾದ್ಯ ಮತ್ತು ವೇದಮಂತ್ರದೊAದಿಗೆ ಅಭಿಷೇಕ ಮಾಡಲಾಯಿತು. ಕಲ್ಯಾಣಿತಾಯಿಗೆ ಪೂಜೆನೆರವೇರಿಸಿ ಸ್ನಪನಶೆಲ್ವರನ್ನು ಕಲ್ಯಾಣಿಗೆ ಕೊಂಡೊಯ್ದು ತೀರ್ಥಸ್ನಾನ ನೆರವೇರಿಸಲಾಯಿತು. ಕಲ್ಯಾಣಿಯ ನಾಲ್ಕೂಕಡೆ ಸೇರಿದ್ದಸಹಸ್ರಾರು ಭಕ್ತರು ಪವಿತ್ರಸ್ನಾನಮಾಡಿದರು. ಬೆಳಿಗ್ಗೆ ತಂಗಳನ್ನದ ಮಂಟಪಕ್ಕೆ ಚೆಲುವನಾರಾಯಣಸ್ವಾಮಿಯಉತ್ಸವ ನಡೆದ ನಂತರ ದೇವಾಲಯದ ಅಮ್ಮನವರ ಸನ್ನಿಧಿಯಲ್ಲಿ ಸಂಧಾನಸೇವೆ ನೆರವೇರಿತು. ಮದ್ಯಾಹ್ನ1-30 ಗಂಟೆಯವೇಳೆಗೆ ಸ್ವಾಮಿಯ ಉತ್ಸವ ಕಲ್ಯಾಣಿಗೆ ತಲುಪಿದ ತೀರ್ಥಸ್ನಾನದ ಪ್ರಕ್ರಿಯೆಗಳು ಆರಂಭವಾಗಿ 3-00ರವೇಳೆಗೆ ಮುಕ್ತಾಯವಾದವು
ಮೇಲುಕೋಟೆ ಪೊಲೀಸರು ಸಾಂಪ್ರದಾಯಿಕ ಪದ್ಧತಿಯಂತೆ ತೀರ್ಥಸ್ನಾನ ಆರಂಭವಾಗುವವರೆಗೆ ಯಾರೂ ಸಹ ಕಲ್ಯಾಣಿಯ ಪವಿತ್ರತೀರ್ಥ ಸ್ಪರ್ಶಿಸದಂತೆ ಕಟ್ಟೆಚ್ಚರವಹಿಸಿದ್ದರು. ಇನ್ಸ್ಪೆಕ್ಟರ್ ಶರತ್ ಮತ್ತು ಸಬ್ಇನ್ಸ್ಪೆಕ್ಟರ್ ಪ್ರಮೊದ್ ನೇತೃತ್ವದ ಮೇಲುಕೋಟೆ ಪೊಲೀಸರತಂಡ ಭದ್ರತೆ ಒದಗಿಸಿತ್ತು. ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪರಮೇಶ್ಗೌಡ ಶಾಲಾಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಲೋಕೇಶ್ ಸೇರಿದಂತೆ ಹಲವು ಗಣ್ಯರು ಉತ್ಸವದಲ್ಲಿ ಭಾಗಿಯಾಗಿದ್ದರು.
ರಾಜಮುಡಿ ಕಿರೀಟಧಾರಣೆ ಮುಕ್ತಾಯ
ಸಂಜೆ ಪರಕಾಲಮಠದಲ್ಲಿ ಪಟ್ಟಾಭಿಷೇಕ ಮಹೋತ್ಸವದ ಕೈಂಕರ್ಯಗಳು ನೆರವೇರಿದವು. ಮಾರ್ಚ 28ರ ರ ವೈರಮುಡಿ ಉತ್ಸವದ ರಾತ್ರಿಯಿಂದ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿದ್ದ ರಾಜಮುಡಿ ಕಿರೀಟ ಬ್ರಹ್ಮೋತ್ಸವದ ಕೊನೆಯ ಉತ್ಸವವಾದ ಗುರುವಾರದ ರಾತ್ರಿಯ ಪಟ್ಟಾಭಿಷೇಕ ಉತ್ಸವದಲ್ಲಿ ಕೊನೆಯಭಾರಿ ಅಲಂಕರಿಸಿತ್ತು. ರಾಜಮುಡಿ ಅಲಂಕಾರ ಮುಕ್ತಾಯವಾಗುತ್ತಿದ್ದಂತೆ ಸ್ವಾಮಿಗೆ ಪುಷ್ಪಾಲಂಕೃತ ಸಮರಭೂಪಾಲವಾಹನೋತ್ಸವ ವೈಭವದಿಂದ ನೆರವೇರಿತು.
ಅರ್ಧಗಂಟೆ ರಸ್ತೆಯಲ್ಲೇ ನಿಂತ ಉತ್ಸವ
ತೀರ್ಥಸ್ನಾನ ಮುಗಿಸಿ ಕಲ್ಯಾಣಿಯಿಂದ ರಾಜಮುಡಿಧರಿಸಿದ ಚೆಲುವನಾರಾಯಣಸ್ವಾಮಿ ಉತ್ಸವ ಹೊರಬಂದಾಗ ಟ್ರಾಪಿಕ್ ಜಾಮ್ ನಿಂದಾಗಿ ಅರ್ಧಗಂಟೆ ಒಂದೇಕಡೆ ನಿಲ್ಲಬೇಕಾದ ಘಟನೆ ನಡೆಯಿತು. ಉತ್ಸವ ಸಾಗುವ ಮಾರ್ಗದಲ್ಲಿ ವಾಹನಗಳು ನಿಲ್ಲದಂತೆ ಎಚ್ಚರವಹಿಸದ ಕಾರಣ ಹಯಗ್ರೀವ ಕಾಲೇಜಿನಿಂದ ಬಾಲಕಿಯ ಶಾಲೆಯವರೆಗೆ ವಾಹನಗಳೂ ಸಾಲಾಗಿ ನಿಂತಪರಿಣಾಮ ಟ್ರಾಪಿಕ್ ಜಾಮ್ ಉಂಟಾಗಿತ್ತು.ಎಲ್ಲಾ ವಾಹನಗಳನ್ನೂ ಕಳುಹಿಸುವವರೆಗೆ ಸ್ವಾಮಿಯ ಉತ್ಸವ ಅಲ್ಲೇ ಇರಬೇಕಾಗಿ ಬಂತು.
ವೈರಮುಡಿ ಬ್ರಹ್ಮೋತ್ಸವದ ನಿಮಿತ್ತ ನಡೆದ ತೀರ್ಥಸ್ನಾನ ಮಹೋತ್ಸವ



