ದಾವಣಗೆರೆ: ಮಕ್ಕಳು ಕನಸು ಕಾನುವುದ ಸಹಜ. ಅವರ ಕನಸು ನನಸಾಗಿಸುವಲ್ಲಿ ಎದುರಾಗುವ ಅಡೆತಡೆಗೆ, ಬೇಕಾದ ಕಾನೂನಿನ ಅರಿವು, ಶ್ರೀರಕ್ಷೆ ನೀಡುವುದರೊಂದಿಗೆ ಭವಿಷ್ಯಕ್ಕೆ ಬೆಳಕಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ ಕರೆಣ್ಣವರ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಕರೂರು ಇಂಡಸ್ಟ್ರಿಯಲ್ನಲ್ಲಿನ ಗ್ಲೋಬಲ್ ಪಬ್ಲಿಕ್ ಶಾಲೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಮಕ್ಕಳ ಕನಸುಗಳಿಗೆ ಕಾನೂನಿನ ಕವಚ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೌಢಾವಸ್ಥೆಗೆ ಬಂದ ಮಕ್ಕಳು ಮತ್ತೆ ಬಾಲ್ಯಕ್ಕೆ ಮರಳಲು ಸಾಧ್ಯವಿಲ್ಲ. ಮಕ್ಕಳ ಬಾಲ್ಯಾವಸ್ಥೆಯ ಜೀವನ ತುಂಬಾ ಮಹತ್ವವಾದುದು. ಆದುದರಿಂದ ಅವರ ಪಾಲನೆ ಪೋಷಣೆಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕು. ಮಕ್ಕಳು ಸಹ ಬಾಲ್ಯಾವಸ್ಥೆಯ ಜೀವನದಲ್ಲಿದ್ದ್ದಾಗಲೇ ಸರಿಯಾದ ರೀತಿಯಲ್ಲಿ ಬಳಸಿಕೊಂಡಾಗ, ಪೋಷಕರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪೂರೈಸಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುವುದು ಎಂದರು.
ಯಾವುದೇ ಒಬ್ಬ ಹೆಣ್ಣು ಗರ್ಭಧರಿಸಿದ ೪೫ ದಿನದಿಂದಲೂ ಮಕ್ಕಳ ಹಕ್ಕುಗಳು ಪ್ರಾರಂಭವಾಗುತ್ತವೆ. ಗರ್ಭಿಣಿ ತಾಯಿ ಆರೋಗ್ಯವಂತರಾಗಿರಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಹಲವಾರು ಸೌಲಭ್ಯ, ಪೌಷ್ಠಿಕತೆ ಹೊಂದಿರುವ ಆಹಾರ ವಿತರಿಸಲಾಗುತ್ತದೆ. ಆದರೆ ಇಂದಿನ ಮಕ್ಕಳು ಹೆಚ್ಚಿನ ಸಮಯ ಮೊಬೈಲ್, ಟಿವಿ, ಸಾಮಾಜಿಕ ಮಾಧ್ಯಮಗಳಲ್ಲಿ ಕಾಲಹರಣ ಮಾಡುವುದರ ಜೊತೆಗೆ ತಮ್ಮ ಭವಿಷ್ಯದ ಜೀವನವನ್ನೇ ನಾಶ ಮಾಡಿಕೊಳುತ್ತಿದ್ದಾರೆ. ಆದ್ದರಿಂದ ಮಕ್ಕಳು ಇಂತಹ ದುಷ್ಚಟಗಳಿಂದ ದೂರವಿದ್ದು ಗುಣಮಟ್ಟದ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಬಾಳಬೇಕು. ಮುಂದೆ ಗುರಿ, ಹಿಂದೆ ಗುರು ಏನಾದರೂ ಸಾಧಿಸಬೇಕೆಂಬ ಛಲ, ಅಚಲವಾದ ಮನೋಭಾವ ಹೊಂದಿರಬೇಕು. ವಿದ್ಯಾಭಾಸದ ಹಾಗೂ ಕಠಿಣ ಪರಿಶ್ರಮ ಜತೆಗೆ ನಿರಂತರ ಪ್ರಯತ್ನದಿಂದ ಯಶಸ್ವಿಯಾಗಲು ಸಾಧ್ಯ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ದಿನಗೂಲಿ ನೌಕರ, ಕಾಯಿಪಲ್ಯ ಮಾರುವ ಕೂಲಿ ಕಾರ್ಮಿಕರು ಸಹ ತನ್ನ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕೆಂಬ ದೃಷ್ಟಿಯಿಂದ ಗುಣಮಟ್ಟದ ಶಿಕ್ಷಣ ನೀಡಲು ಬಯಸುತ್ತಾನೆ. ಈ ನಿಟ್ಟಿನಲ್ಲಿ ಮಕ್ಕಳಿಗಾಗಿ ಸಂವಿಧಾನದಲ್ಲಿ ಉಚಿತ ಮತ್ತು ಕಡ್ಡಾಯ ಶೀಕ್ಷಣ, ಮೂಲಭೂತ ಹಕ್ಕುಗಳು, ಮಕ್ಕಳ ರಾಜ್ಯ ನಿರ್ದೇಶಕ ತತ್ವಗಳು ಹೀಗೆ ಹಲವಾರು ಶಾಸನಗಳನ್ನು ರೂಪಿಸಿ ಅವರಿಗಾಗಿ ವಿಶೇಷವಾಗಿ ಸ್ಥಾನಮಾನ ನೀಡಿದೆ. ಇವೆಲ್ಲವುಗಳನ್ನು ಜವಾಬ್ದಾರಿಯುತ ಸ್ಥಾನಮಾದಲ್ಲಿರುವ ನಾವು ಬೇಜವಾಬ್ದಾರಿತನ, ಅಸಡ್ಡೆಯಿಂದ ನಿರ್ವಹಿಸಿದಲ್ಲಿ ದೇಶಕ್ಕೆ, ನಾಡಿಗೆ ಒಳಿತಲ್ಲ. ಇಂದಿನ ಮಕ್ಕಳು ನಾಳಿನ ಭವಿಷ್ಯವನ್ನು ನಿರ್ಧರಿಸುವಂತ ಪ್ರಜೆಗಳಾಗಬೇಕು. ಆದ್ದರಿಂದ ಭವಿಷ್ಯದ ಪೀಳಿಗೆಗೆ ಕಾನೂನು, ಸಂವಿಧಾನ ಬಗ್ಗೆ ತಿಳಿಹೇಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಗುರುಬಸವರಾಜ್, ದಕ್ಷಿಣ ವಲಯ ಸಂಚಾರಿ ಪೊಲೀಸ್ ಠಾಣಾಧಿಕಾರಿ ಶೈಲಜ, ಉತ್ತರ ವಲಯ ಸಂಚಾರಿ ಪೊಲೀಸ್ ಠಾಣಾಧಿಕಾರಿ ಜಯಶೀಲ, ಜಿಲ್ಲಾ ನ್ಯಾಯಾಲಯ ವಕೀಲ ವೆಂಕಟೇಶ್, ಗ್ಲೋಬಲ್ ಪಬ್ಲಿಕ್ ಶಾಲೆ ಕಾರ್ಯದರ್ಶಿ ಅಸಾದ್ ಉಲ್ಲಾ ಸೇರಿದಂತೆ ಶಾಲೆಯ ಸಿಬ್ಬಂದಿ, ಮಕ್ಕಳು ಇದ್ದರು.



