ಹೊಸದಿಲ್ಲಿ: ರಿಷಭ್ ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆಯ ಕಾಲ ಸನ್ನಿಹಿತವಾಗಿದೆ. ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿರುವ ತಂಡನ್ನು ಮೇಲಕ್ಕೆತ್ತುವ ಬಹು ದೊಡ್ಡ ಸವಾಲು ಪಂತ್ ಆಯಂಡ್ ಕಂಪೆನಿಯ ಮೇಲಿದೆ. ಬುಧವಾರ ತವರಿನ `ಕೋಟ್ಲಾ’ ಅಂಗಳದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದ್ದು, ಇಲ್ಲಿಂದ ಡೆಲ್ಲಿ ಅದೃಷ್ಟ ಬದಲಾದೀತೇ ಎಂಬುದು ಅಭಿಮಾನಿಗಳ ನಿರೀಕ್ಷೆ.
`ಹೋಮ್ ಕಮಿಂಗ್’ ಎಂಬುದು ಡೆಲ್ಲಿ ಪಾಲಿಗೆ ವರದಾನವಾಗೇನೂ ಆಗಲಿಲ್ಲ. ಆರಂಭದಲ್ಲೇ ಬಿಗ್ ಹಿಟ್ಟರ್ಗಳನ್ನು ಒಳಗೊಂಡ ಹೈದರಾಬಾದನ್ನು ತವರಲ್ಲಿ ಎದುರಿಸುವ ಅವಕಾಶ ಎದುರಾದದ್ದು ಡೆಲ್ಲಿಗೆ ಉಭಯಸಂಕಟವಾಗಿ ಪರಿಣಮಿಸಿತು.
ಎ. 20ರಂದು ನಡೆದ ಈ ಮುಖಾಮುಖೀಯಲ್ಲಿ ಹೈದರಾಬಾದ್ 7ಕ್ಕೆ 266 ರನ್ ರಾಶಿ ಹಾಕಿತು. ಜವಾಬಿತ್ತ ಡೆಲ್ಲಿ 199ಕ್ಕೆ ಆಲೌಟ್ ಆಯಿತು. ಇದು 8 ಪಂದ್ಯಗಳಲ್ಲಿ ಡೆಲ್ಲಿಗೆ ಎದುರಾದ 5ನೇ ಸೋಲು. ಪ್ಲೇ ಆಫ್ ರೇಸ್ನಲ್ಲಿ ಉಳಿಯಬೇಕಾದರೆ ಗುಜರಾತ್ ವಿರುದ್ಧ ಗೆಲುವು ಸಾಧಿಸಿ ಈ ಓಟವನ್ನು ಮುಂದುವರಿಸಿಕೊಂಡು ಹೋಗಬೇಕಿದೆ.