ಗುವಾಹಟಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಶುಕ್ರವಾರ ಐಪಿಎಲ್ 16ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ನಿಂದ ಹ್ಯಾಟ್ರಿಕ್ ಜಯ ಗಳಿಸಿರುವ ರಾಜಸ್ಥಾನ, ತನ್ನಷ್ಟೇ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿರುವ ಕಳೆದ ಬಾರಿಯ ಚಾಂಪಿಯನ್ ಬೆಂಗಳೂರು ತಂಡದ ದೊಡ್ಡ ಸವಾಲು ಎದುರಿಸಲು ಸಜ್ಜಾಗಿದೆ.
ಉಭಯ ತಂಡಗಳು ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಕಾರಣ ಬರ್ಸಪರ ಕ್ರೀಡಾಂಗಣದಲ್ಲಿ ರನ್ ಮಳೆ ಸುರಿಯುವ ನಿರೀಕ್ಷೆಯಿದೆ. ರನ್ ಮಷಿನ್ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟರ್ಗಳು ಉತ್ತಮ ಫಾಮ್ರ್ನಲ್ಲಿರುವ ಕಾರಣ ಆರ್ಸಿಬಿಯ ಬ್ಯಾಟಿಂಗ್ ಕ್ರಮಾಂಕ ಸದ್ಯ ಎಂಥ ಬೌಲಿಂಗ್ ಶಕ್ತಿಯನ್ನು ಪುಡಿಗಟ್ಟುವ ಸಾಮರ್ಥ್ಯ ಹೊಂದಿದೆ.
ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಿಂಚಿನ ಸಂಚಲನ ಮೂಡಿಸಿದ ಟಿಮ್ ಡೇವಿಡ್, ನಾಯಕ ರಜತ್ ಪಾಟೀದಾರ್ ಆರ್ಸಿಬಿಯ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಆದರೆ ಆರ್ಸಿಬಿ ಬೌಲಿಂಗ್ ಘಟಕ ತನ್ನ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಜೋಶ್ ಹೇಜಲ್ವುಡ್ ಅನುಪಸ್ಥಿತಿಯಲ್ಲಿ ಜಾಕೋಬ್ ಡಫಿ ತಂಡದ ಬೌಲಿಂಗ್ ಶಕ್ತಿಗೆ ಬಲ ತುಂಬಿದ್ದಾರೆ. ಮಧ್ಯಮ ಓವರ್ಗಳಲ್ಲಿರನ್ ನಿಯಂತ್ರಿಸಲು ಎಡವುತ್ತಿರುವ ಕೃಣಾಲ್ ಪಾಂಡ್ಯ ಮತ್ತು ಸುಯಾಶ್ ಶರ್ಮ ರಾಯಲ್ಸ್ ವಿರುದ್ಧ ತಮ್ಮ ಕೈಚಳಕವನ್ನು ಇನ್ನಷ್ಟು ಸುಧಾರಿಸಿಕೊಳ್ಳಬೇಕಿದೆ. ಅತ್ತ ಜೈಸ್ವಾಲ್, ವೈವಭ್ನಂತಹ ಬ್ಯಾಟಿಂಗ್ ದೈತ್ಯರನ್ನು ಹೊಂದಿರುವ ರಾಯಲ್ಸ್ ಸತತ ಮೂರು ಜಯದೊಂದಿಗೆ ಅಂಕಪಟ್ಟಿಯಲ್ಲಿಮೊದಲ ಸ್ಥಾನ ಗಳಿಸಿದೆ. ಇವರಿಬ್ಬರ ಸ್ಥಿರ ಆಟವು ಆತಿಥೇಯ ತಂಡದ ಉತ್ತಮ ಆರಂಭಕ್ಕೆ ಕಾರಣವಾಗಿದೆ.
ಹಿಂದಿನ ಪಂದ್ಯದಲ್ಲಿ ಬುಮ್ರಾ ಅವರ ಓವರ್ನ ಮೊದಲ ಎಸೆತವನ್ನೇ ಸಿಕ್ಸರ್ಗಟ್ಟಿದ ವೈಭವ್ ಅವರನ್ನು ಆರ್ಸಿಬಿ ಬೌಲರ್ಗಳು ಹೇಗೆ ನಿಯಂತ್ರಿಸಲಿದ್ದಾರೆ ಎಂಬುದು ಕುತೂಹಲವಾಗಿದೆ. ಬರ್ಸಪರ ಕ್ರಿಕೆಟ್ ಗ್ರೌಂಡ್ನಲ್ಲಿ ಆಡಿದ ಹಿಂದಿನ ಎರಡು ಪಂದ್ಯಗಳಲ್ಲಿ ಜಯ ಗಳಿಸಿರುವ ರಾಯಲ್ಸ್ ಅತ್ಮಸ್ಥೈರ್ಯದೊಂದಿಗೆ ಕಣಕ್ಕಿಳಿಯುತ್ತಿದೆ. ಅತ್ತ ತವರಿನಲ್ಲಿ ಆಡಿದ ಹಿಂದಿನ 2 ಪಂದ್ಯಗಳಲ್ಲಿ ಜಯ ಗಳಿಸಿರುವ ಆರ್ಸಿಬಿ ಹಾಲಿ ಋತುವಿನಲ್ಲಿ ಇದೇ ಮೊದಲ ಸಲ ತವರಿನಾಚೆಯ ಪಂದ್ಯಕ್ಕೆ ಸಜ್ಜಾಗಿದೆ.
ಇಂದು ರಾಯಲ್ಸ್ಗೆ `ರಾಯಲ್’ ಚಾಲೆಂಜ್



