ರಾಯಪುರ್: ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ಶುಕ್ರವಾರ ಆಸ್ಟ್ರೇಲಿಯಾ ಎದುರಿನ ಸರಣಿಯ ನಾಲ್ಕನೇ ಟಿ20 ಪಂದ್ಯದಲ್ಲಿ ಆಡಲಿದೆ.2-1ರಿಂದ ಮುಂದಿರುವ ಭಾರತ ತಂಡವು ಸರಣಿ ಕೈವಶ ಮಾಡಿಕೊಳ್ಳಲು ಇದು ಸುಸಂದರ್ಭ. ಇಲ್ಲದಿದ್ದರೆ ಬೆಂಗಳೂರಿನಲ್ಲಿ ನಡೆಯುವ ಕೊನೆಯ ಪಂದ್ಯದಲ್ಲಿ ಕಠಿಣ ಹಾದಿ ಸವೆಸಬೇಕಾಗಬಹುದು.
ಭಾರತ ತಂಡವು ಮೂರನೇ ಪಂದ್ಯದಲ್ಲಿ ಋತುರಾಜ್ ಗಾಯಕವಾಡ್ ಅವರ ಸಿಡಿಲಬ್ಬರದ ಶತಕದಿಂದಾಗಿ ಭಾರತ ತಂಡವು ಬೃಹತ್ ಗುರಿಯನ್ನು ಒಡ್ಡಿತ್ತು. ಆದರೆ, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಅವರ ಮಿಂಚಿನ ಶತಕವನ್ನು ತಡೆಯಲು ಭಾರತದ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಪಂದ್ಯದಲ್ಲಿ ಸೋತಿತು.
ವೇಗಿ ಪ್ರಸಿದ್ಧ ಕೃಷ್ಣ ಕೇವಲ ನಾಲ್ಕು ಓವರ್ಗಳಲ್ಲಿ 68 ರನ್ಗಳನ್ನು ಕೊಟ್ಟರು. ಅದರಲ್ಲೂ ನಿರ್ಣಾಯಕವಾಗಿದ್ದ ಕೊನೆಯ ಓವರ್ನಲ್ಲಿ 21 ರನ್ಗಳನ್ನು ಬಿಟ್ಟುಕೊಟ್ಟರು. ಆವೇಶ್ ಖಾನ್ ಕೂಡ ಲೈನ್ ಮತ್ತು ಲೆಂಗ್ತ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಇದೀಗ ತಂಡಕ್ಕೆ ದೀಪಕ್ ಚಾಹರ್ ಮರಳಿದ್ದಾರೆ.
ಆದ್ದರಿಂದ ಅವರ ಮೇಲೆ ಹೊಸ ಚೆಂಡಿನ ಓವರ್ಗಳನ್ನು ನಿರ್ವಹಿಸುವ ಹೊಣೆ ಬೀಳುವ ಸಾಧ್ಯತೆ ಇದೆ. ನವವಿವಾಹಿತ ಮುಕೇಶ್ ಕುಮಾರ್ ಒಂದು ಪಂದ್ಯದ ಅನುಪಸ್ಥಿತಿಯ ನಂತರ ತಂಡಕ್ಕೆ ಮರಳಲಿದ್ದಾರೆ.ಆರ್ಷದೀಪ್ ಸಿಂಗ್ ಅವರು ತಮ್ಮ ಎಸೆತಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಯೋಗಿಸುವ ಅಗತ್ಯ ಇದೆ. ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ರವಿ ಬಿಷ್ಣೋಯಿ ಅವರು ಜೊತೆಯಾಟಗಳನ್ನು ಮುರಿಯುವಲ್ಲಿ ಸಫಲರಾದರೆ ಭಾರತದ ಹಾದಿ ಸುಲಭವಾಗಬಹುದು.