ಪೀಣ್ಯ ದಾಸರಹಳ್ಳಿ: ಬಾಗಲಗುಂಟೆಯ ಎಂ.ಇ.ಐ ಆಟದ ಮೈದಾನದಲ್ಲಿ ಶ್ರೀವಾರಿ ಫೌಂಡೇಶನ್ ಸಹಯೋಗದೊಂದಿಗೆ ಶಾಸಕ ಎಸ್. ಮುನಿರಾಜು ನೇತೃತ್ವದಲ್ಲಿ ಫೆ.17 ರಂದು ಶನಿವಾರ ಮಧ್ಯಾಹ್ನ 3:30 ರಿಂದ ರಾತ್ರಿ 9ರವರೆಗೆ ಲೋಕ ಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದೆ.
‘ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ತಿರುಪತಿ ದೇವಸ್ಥಾನದಿಂದಲೇ ಉತ್ಸವ ಮೂರ್ತಿ ಹಾಗೂ ಲಡ್ಡು ಪ್ರಸಾದವನ್ನು ತರಲಾಗುತ್ತಿದೆ. ಅರ್ಚಕರು ಸಹ ಅಲ್ಲಿಂದಲೇ ಆಗಮಿಸಲಿದ್ದಾರೆ’ ಎಂದು ಶಾಸಕ ಮುನಿರಾಜು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರನ್ನು ವೈಭವದಿಂದ ಮೆರವಣಿಗೆಯ ಮೂಲಕ ಕಲ್ಯಾಣೋತ್ಸವ ಮಂಟಪಕ್ಕೆ ಕರೆತರಲಾಗುವುದು’
‘ತಿರುಪತಿ ದೇವಸ್ಥಾನದ ಗರ್ಭಗುಡಿಯಲ್ಲಿರುವ ಮಾದರಿಯಲ್ಲೇ ವೇದಿಕೆ ನಿರ್ಮಿಸಿ ತಿರುಪತಿ ತಿಮ್ಮಪ್ಪನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ಪ್ರವೇಶ ಉಚಿತವಾಗಿರುತ್ತದೆ ದಾಸರಹಳ್ಳಿ ಕ್ಷೇತ್ರದ ಲಕ್ಷಾಂತರ ಭಕ್ತರು ಸ್ವಾಮಿಯ ದರ್ಶನ ಪಡೆದು ಪುನೀತರಾಗಬೇಕು’ ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್. ಮುನಿರಾಜು ಮಾತನಾಡಿದರು. ಬಿಜೆಪಿ ಮುಖಂಡರಾದ ಸುಜಾತ ಎಸ್. ಮುನಿರಾಜು ಪಿ.ಎಚ್. ರಾಜು, ಬಿ. ಕೃಷ್ಣಮೂರ್ತಿ, ಭರತ್ ಸೌಂದರ್ಯ, ಬಿ.ಎಂ. ನಾರಾಯಣ್, ಗುರುಪ್ರಸಾದ್, ನಿಶ್ಚಲ್, ಬಿ.ಆರ್. ಸತೀಶ್, ನಾಗಣ್ಣ, ಸಿ.ಎನ್. ದಯಾನಂದ್, ವಿನೋದ್ ಗೌಡ ಮುಂತಾದವರು ಇದ್ದರು.