ಮೇಲುಕೋಟೆ: ಮಕ್ಕಳಭಾಗ್ಯ ಕರುಣಿಸುವ ಚೆಲುವನಾರಾಯಣಸ್ವಾಮಿಯ “ತೊಟ್ಟಿಲಮಡುಜಾತ್ರೆ” “ಅಷ್ಠತೀರ್ಥೋತ್ಸವ ಎಂಬ ವಿಶಿಷ್ಠ ಆಚರಣೆ ಮೇಲುಕೋಟೆ ದೇವಾಲಯದಲ್ಲಿ ಅನೂಚಾನವಾಗಿ ನಡೆಯುತ್ತಾ ಬಂದಿದ್ದು, ನವೆಂಬರ್ 22ರಂದು ಬುಧವಾರ ತೊಟ್ಟಿಲಮಡು ಜಾತ್ರೆ ನಡೆಯಲಿದೆ.
ಈ ವಿಶಿಷ್ಠ ಸಂಪ್ರದಾಯ, ಪರಂಪರೆಯ ಆಚರಣೆ ನಂತರ ಅಪೇಕ್ಷಿತ ಫಲ ನೀಡುತ್ತಿರುವ ಕಾರಣ ಭಕ್ತರ ನಂಬಿಕೆಗೆ ಇಂಬು ದೊರೆಯುತ್ತಿದೆ. ವೈದ್ಯರೂ ಸಹ ಕೈಚೆಲ್ಲಿದ ಎಷ್ಠೋ ಪ್ರಕರಣಗಳ ದಂಪತಿಗಳಿಗೆ ತೊಟ್ಟಿಲಭಾಗ್ಯ ದೊರೆತಿರುವುದು ಉತ್ಸವದಲ್ಲಿ ಭಾಗಿಯಾದ ದಂಪತಿಗಳಿಗೆ ಅನುಭವಕ್ಕೆ ಬರುತ್ತಿರುವ ಕಾರಣ ಮಹೋತ್ಸವದಲ್ಲಿ ಹರಕೆಕಟ್ಟಿಕೊಂಡು ಭಾಗವಹಿಸುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ.
ಬಹುಕಾಲ ಮಕ್ಕಳಾಗದ ದಂಪತಿಗಳು ಮತ್ತು ಮುದ್ದಾದ ಆರೋಗ್ಯಕರ ಕಂದಮ್ಮ ಅಪೇಕ್ಷಿಸುವ ನವದಂತಿಗಳು ಹರಕೆ ಕಟ್ಟಿಕೊಂಡು ಮಡಿಲು ತುಂಬಿ ಮಹೋತ್ಸವದಲ್ಲಿ ಭಾಗಿಯಾಗುವುದು ತೊಟ್ಟಿಲಮಡು ಜಾತ್ರೆಯ ವಿಶೇಷವಾಗಿದೆ.ಹೀಗಿದೆ ಆಚರಣೆ: ಕಲ್ಯಾಣಿ ತೀರದಲ್ಲಿ ಪತ್ನಿ ಮಡಿಲುತುಂಬಿ ಚೆಲುವನಾರಾಯಣಸ್ವಾಮಿಯ ಪಾದುಕೆಯ ಪಲ್ಲಕ್ಕಿಯೋಡನೆ ಸಾಗಿ ಗಿರಿಶಿಖರಗಳ ಮಧ್ಯೆ ಇರುವ ಔಷದೀಯ ಗುಣವಿರುವ ಎಂಟು ತೀರ್ಥಗಳಲ್ಲಿ ಸ್ನಾನ ಮಾಡಬೇಕು ಈ ಎಲ್ಲಾ ಕೊಳಗಳಿಗೆ ಪಾದುಕೆಯೊಂದಿಗೆ ಹೋಗಿ ಬರಲು ಕನಿಷ್ಠ 20ಕಿಮಿ ಕ್ರಮಸಬೇಕಾಗುತ್ತದೆ.
ಉತ್ಸವದ ಮಧ್ಯೆ ಸಾಗುತ್ತಿದ್ದರೆ ಈ ಶ್ರಮ ಗಣನೆಗೆ ಬರುವುದಿಲ್ಲ ನಡೆಯಲು ಸಾಧ್ಯವಾಗದ ದಂಪತಿಗಳು ಪಂಚಕಲ್ಯಾಣಿ ಮತ್ತು ವೈಕುಂಠಗಂಗೆಯಲ್ಲಿ ಸ್ನಾನಮಾಡಿ ಅಲ್ಲಿರುವ ತೊಟ್ಟಿಲಿಗೆ ಪೂಜೆ ಮಾಡಿ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರೆ ಇಷ್ಠಾರ್ಥ ಸಿದ್ಧಿಯಾಗುತ್ತದೆ. ದೇವರ ನೈವೇಧ್ಯದ ಹಾಲು ಹಣ್ಣು, ತೀರ್ಥಬಿಟ್ಟರೆ ಬೇರೇನೂ ಸೇವಿಸುವಂತಿಲ್ಲ.ಇನ್ನು ಅನುರೂಪ ಕಂಠಣಭಾಗ್ಯ ಅಪೇಕ್ಷಿಸುವವರು ಸಹ ಉತ್ಸವದಲ್ಲಿ ಪಾಲ್ಗೊಂಡರೆ ಶೀಘ್ರ ಕಂಕಣಬಲ ಕೂಡಿಬರಲಿದೆ ಎಂಬ ನಂಬಿಕೆ ಅನೂಚಾನವಾಗಿ ರೂಡಿಯಲ್ಲಿದೆ.
ಅಷ್ಠ ತೀರ್ಥಗಳು: ವೇದಪುಷ್ಕರಣಿ, ಶ್ರೀರಾಮ ಸೀತೆಗಾಗಿ ಬಾಣಬಿಟ್ಟು ನೀರುಕ್ಕಿಸಿದ ದನುಷ್ಕೋಟಿ, ಬೆಟ್ಟಗುಡ್ಡಳಿಂದ ಹರಿಯುವ ಯಾದವಾತೀರ್ಥ, ದರ್ಭತೀರ್ಥ, ಪಲಾಶತೀರ್ಥ, ಪದ್ಮತೀರ್ಥ, ಬಾಲಕರ ಶಾಲೆ ಹಿಂಭಾಗವಿರುವ ನರಸಿಂಹತೀರ್ಥ, ಮೋಕ್ಷ ಕರುಣಿಸುವ ನಾರಾಯಣತೀರ್ಥ ಹೀಗೆ ಎಂಟು ಪವಿತ್ರ ತೀರ್ಥಕೊಳಗಳು ಮೇಲುಕೋಟೆಯ ಗಿರಿಶಿಖರಗಳ ಮಧ್ಯೆ ನಿರ್ಮಾಣವಾಗಿದೆ.
ತೊಟ್ಟಿಲಮಡು ಜಾತ್ರಾ ದಿನದ ಕಾರ್ಯಕ್ರಮಗಳು: ಅಷ್ಠತೀರ್ಥೋತ್ಸವ ನವೆಂಬರ್ 22ರಂದು ಬೆಳಿಗ್ಗೆ ಸುಮಾರು 7 ಗಂಟೆಗೆ ಸ್ವಾಮಿಯ ಪಲ್ಲಕ್ಕಿ ದೇಶಿಕರ ಸನ್ನಿದಿಗೆ ಆಗಮನ ಬೆಳಿಗ್ಗೆ 8-30ಕ್ಕೆ ರಾಜಮುಡಿಯೊಂದಿಗೆ ಕಲ್ಯಾಣಿಗೆ ಉತ್ಸವ, ಬೆಳಿಗ್ಗೆ 9 ಕಲ್ಯಾಣಿಯಲ್ಲಿ ಪವಿತ್ರಸ್ನಾನದೊಂದಿಗೆ ಆರಂಭವಾಗುವ ಅಷ್ಠತೀರ್ಥೋತ್ಸವ ಸಂಜೆ 5ಗಂಟೆ ವೇಳೆಗೆ ಕಣಿವೆ ಬಳಿಯಿರುವ ವೈಕುಂಠಗಂಟೆ ತೊಟ್ಟಿಲಮಡು ಬಳಿ ಮುಕ್ತಾಯವಾಗುತ್ತದೆ.
ಋಷಿಮುನಿಗಳು ಭಗವಂತನನ್ನು ದ್ಯಾನಮಾಡಿ ಸಾಕ್ಷಾತ್ಕಾರ ಪಡೆದ ಎಂಟು ಪವಿತ್ರ ತೀರ್ಥಗಳಲ್ಲಿ ಸ್ವಾಮಿಯ ಪಾದುಕೆಗೆ ಅಭಿಷೇಕ ನೆರವೇರುವ ಆಚರಣೆಯೇ ಅಷ್ಠತೀರ್ಥೋತ್ಸವವಾಗಿದ್ದು, ಉತ್ಸವ ಆರಂಭದವೇಳೆ ಕಲ್ಯಾಣಿಯಲ್ಲಿ ಪ್ರಥಮ ಅಭಿಷೇಕ ನೆರವೇರಿದರೆ ಸಂಜೆ ವೈಕುಂಠಗಂಟೆಯಲ್ಲಿ ಕೊನೆಯ ಅಭಿಷೇಕನಡೆಯುತ್ತದೆ. ನಂತರ ಶ್ರೀಯೋಗಾನರಸಿಂಹಸ್ವಾಮಿಯ ಬೆಟ್ಟದ ಗಿರಿಪ್ರದಕ್ಷಿಣೆಯೊಂದಿಗೆ ಅಷ್ಠತೀರ್ಥೋತ್ಸವ ಮುಕ್ತಾಯವಾಗಲಿದೆ.
ಹರಕೆ ಹೀಗೆ: ದಂಪತಿಗಳು ಕಲ್ಯಾಣಿಯಲ್ಲಿ ಮುತ್ತೈದೆಯರಿಂದ ಪ್ರಾರ್ಥನೆ ಮಾಡಿಸಿ ಅಲ್ಲಿರುವ ದೇವಾಲಯದ ಸ್ಥಾನೀಕರು ಅಥವ ಅರ್ಚಕರ ಸಲಹೆಯಂತೆ ಮಡಿಲುತುಂಬಿಸಿಕೊಳ್ಳಬೇಕು ಎಂಟು ತೀರ್ಥಗಳಲ್ಲಿ ಪವಿತ್ರಸ್ನಾನಮಾಡಿ ರಾತ್ರಿ ಯೋಗಾನರಸಿಂಹಸ್ವಾಮಿಯ ಬೆಟ್ಟದಲ್ಲಿ ಪಿಂಡಪ್ರಸಾದ ಸ್ವೀಕರಿಸಬೇಕು.