ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಮತ್ತೆ ಟೋಯಿಂಗ್ ಆರಂಭವಾಗಲಿದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಯನ್ನು ಜಿಬಿಎ ಮತ್ತು ಪೊಲೀಸ್ ಇಲಾಖೆ ಮಾಡಿಕೊಂಡಿದ್ದು, ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದೆ.
ಸಾರ್ವಜನಿಕರ ತೀವ್ರ ಆಕ್ರೋಶ, ಟೋಯಿಂಗ್ ಸಿಬ್ಬಂದಿ ವರ್ತನೆಯಿಂದ ಬೇಸತ್ತು ಟೋಯಿಂಗ್ ವ್ಯವಸ್ಥೆಯನ್ನು ನಿಲ್ಲಿಸಲಾಗಿತ್ತು. ಟೋಯಿಂಗ್ ಇಲ್ಲದ ಕಾರಣ ವಾಹನ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡೋದು, ಅಡ್ಡಾದಿಡ್ಡಿ ನಿಲ್ಲಿಸಿ ಹೋಗೋದು, ಹಳೆಯ ವಾಹನಗಳನ್ನು ಪಾರ್ಕ್ ಮಾಡಿ, ತಿಂಗಳಗಟ್ಟಲೇ ರಸ್ತೆಯಲ್ಲೇ ಬಿಡುತ್ತಿದ್ದ ಕಾರಣದಿಂದಾಗಿ ನಗರದಲ್ಲಿ ಇತ್ತೀಚಿಗೆ ಟ್ರಾಫಿಕ್ ಜಾಸ್ತಿಯಾಗಿದೆ. ಇದರ ಬಗ್ಗೆ ದೂರುಗಳು ಬಂದ ಹಿನ್ನೆಲೆ ಕೆಲ ದಿನಗಳ ಹಿಂದಷ್ಟೆ ಡಿಸಿಎಂ ಡಿಕೆ ಶಿವಕುಮಾರ್ ನಗರದಲ್ಲಿ ಮತ್ತೆ ಟೋಯಿಂಗ್ ಆರಂಭಿಸೋ ಬಗ್ಗೆ ಹೇಳಿಕೆ ನೀಡಿದ್ರು. ಈ ಹೇಳಿಕೆ ಬೆನ್ನಲ್ಲೆ ಅಲರ್ಟ್ ಆಗಿದ್ದ ಪೊಲೀಸ್ ಇಲಾಖೆ, ಟೋಯಿಂಗ್ ಮಾಡೋಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ.
ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಿಗೆ ತಲಾ ಎರಡು ವಾಹನಗಳಂತೆ ಹತ್ತು ಟೋಯಿಂಗ್ ವಾಹನಗಳನ್ನು ಸರ್ಕಾರದ ವತಿಯಿಂದ ನೀಡಿದ್ದು, ಅದರಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ಓರ್ವ ಕಾನ್ಸ್ಟೇಬಲ್ ಮತ್ತು ವಾಹನಗಳನ್ನು ಟೋ ಮಾಡಲು ಜಿಬಿಎಯಿಂದ ನಾಲ್ಕು ಸಿಬ್ಬಂದಿ ನೇಮಿಸಲಾಗಿದೆ.
ಟೋಯಿಂಗ್ ವಾಹನದ ಮುಂಭಾಗ ಮತ್ತು ಹಿಂಭಾಗದಲ್ಲಿ ಸಿಸಿಟಿವಿ ಅಳವಡಿಸಿದ್ದು, ಯಾವುದೇ ಅವಘಡ ಅಥವ ಗಲಾಟೆಗಳು ನಡೆದರೆ ಅದನ್ನು ಸೆರೆಹಿಡಿಯಲಾಗುತ್ತದೆ. ಆ ಮೂಲಕ ಸಿಬ್ಬಂದಿಯ ವರ್ತನೆ ಮೇಲೆ ಹಿರಿಯ ಅಧಿಕಾರಿಗಳು ಕಣ್ಣೀಡಲಿದ್ದಾರೆ. ಮುಖ್ಯವಾಗಿ ಅತಿ ಹೆಚ್ಚು ಟ್ರಾಫಿಕ್ ಆಗುವ ರಸ್ತೆಗಳು, ನೋ ಪಾರ್ಕಿಂಗ್ ಜಾಗಗಳಲ್ಲಿ ಟೋಯಿಂಗ್ ಮಾಡಲು ನಿರ್ಧರಿಸಲಾಗಿದೆ.
ನೋಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವ ವಾಹನಕ್ಕೆ 500 ರೂ. ದಂಡ ವಿಧಿಸುವುದರ ಜತೆಗೆ, ದ್ವಿಚಕ್ರವಾಹನಕ್ಕೆ 650 ಹಾಗೂ 4 ಚಕ್ರ ವಾಹನಗಳಿಗೆ 1000, ಟೋಯಿಂಗ್ ಶುಲ್ಕ ವಿಧಿಸಲಾಗುವುದು. ಟೋಯಿಂಗ್ ಸಿಬ್ಬಂದಿಗೆ ಬಾಡಿ ಕ್ಯಾಮೆರಾ ಇರುವುದು ಕಡ್ಡಾಯವಾಗಿದೆ.
ಇಂದು ಸಂಜೆ ಅಥವಾ ನಾಳೆಯಿಂದ ಈ ವ್ಯವಸ್ಥೆ ಜಾರಿಗೆ ಬರಲಾಗುವುದು ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಮತ್ತೆ ಟೋಯಿಂಗ್ ಜಾರಿಗೆ ವಾಹನ ಸಂಚಾರ ದಟ್ಟಣೆ, ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸಿದರೆ ಕಠಿಣ ಕ್ರಮ



