ಬೇಲೂರು: ಬೇಲೂರು ಹಾಗೂ ಬಿಕ್ಕೋಡು ನಡುವಿನ ರಾಜ್ಯ ಹೆದ್ದಾರಿ ಇತ್ತೀಚಿನ ದಿನಗಳಲ್ಲಿ ತುಂಬಾ ಹದಗೆಟ್ಟ ಸ್ಥಿತಿಯಲ್ಲಿದ್ದು, ದಿನನಿತ್ಯ ಈ ರಸ್ತೆಯ ಮೂಲಕ ಸಂಚರಿಸುವ ವಾಹನ ಸವಾರರು ಜೀವ ಪಣಕ್ಕಿಟ್ಟು ಪ್ರಯಾಣ ಮಾಡುತ್ತಿರುವಂತಾಗಿದೆ. ರಸ್ತೆಗಳಲ್ಲಿ ಉಂಟಾದ ಆಳವಾದ ಗುಂಡಿಗಳು ಹಾಗೂ ಅಸಮತೋಲನದಿಂದಾಗಿ ವಾಹನ ಸವಾರರಿಗೆ ಸಂಚರಿಸಲು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದ್ದು, ಸಾರ್ವಜನಿಕರ ಆಕ್ರೋಶ ಉಕ್ಕಿ ಬರುತ್ತಿದೆ.
ಇದೇ ರಸ್ತೆಯಲ್ಲಿ ಕುಶಾವರ ಗ್ರಾಮದ ನಿವಾಸಿಗಳಾದ ನರೇಂದ್ರ ಮತ್ತು ಸುರೇಶ್ ಅವರು ಕೆಲಸದ ನಿಮಿತ್ತ ಬೇಲೂರಿಗೆ ಬರುತ್ತಿದ್ದ ವೇಳೆ ತಗರೆ ಸಮೀಪದ ಬೃಹತ್ ಗುಂಡಿಯನ್ನು ತಪ್ಪಿಸಲು ಯತ್ನಿಸುವಾಗ ನಿಯಂತ್ರಣ ತಪ್ಪಿ ಬೈಕ್ ಸಮೇತ ಬಿದ್ದು ಕೈಕಾಲುಗಳಿಗೆ ಪೆಟ್ಟುಗೊಂಡಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಸ್ತುತ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ನಂತರ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದ್ದು, ಕುಶಾವರದ ಸುರೇಶ್ ಮಾತನಾಡಿ, `ಈ ರಸ್ತೆ ರಾಜ್ಯ ಹೆದ್ದಾರಿಯಾದರೂ ಕಳೆದ ಹಲವು ವರ್ಷಗಳಿಂದ ದುರಸ್ಥಿಗೆ ಒಳಗಾಗಿಲ್ಲ. ಪ್ರತಿ ದಿನವೂ ಈ ಮಾರ್ಗದಲ್ಲಿ ಸಣ್ಣ ಸಣ್ಣ ಅಪಘಾತಗಳು ನಡೆಯುತ್ತಿವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ವಿಷಯದ ಬಗ್ಗೆ ಸಂಪೂರ್ಣ ನಿರ್ಲಕ್ಷ÷್ಯ ತೋರಿಸುತ್ತಿದ್ದಾರೆ. ತಕ್ಷಣ ಈ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಕ್ರಮ ಕೈಗೊಳ್ಳದಿದ್ದರೆ ನಾವು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಗರೆ ಗ್ರಾಮದ ನಿವಾಸಿಗಳಾದ ನರೇಂದ್ರ, ಚಂದ್ರಶೇಖರ್, ಆಕಾಶ್, ಲೋಕೇಶ್, ರಮೇಶ್ ಮತ್ತಿತರರು ಸ್ಥಳದಲ್ಲಿ ಉಪಸ್ಥಿತರಿದ್ದು, ಗಾಯಗೊಂಡವರಿಗೆ ನೆರವು ನೀಡಿದರು. ಸ್ಥಳೀಯರು ಕೂಡ ಶೀಘ್ರದಲ್ಲೇ ರಸ್ತೆ ದುರಸ್ತಿ ಮಾಡುವಂತೆ ಸಾರ್ವಜನಿಕ ನಿರ್ಮಾಣ ಇಲಾಖೆಗೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆ.
ಜನರಿAದ ಆತಂಕ ವ್ಯಕ್ತ ಸಾರ್ವಜನಿಕರ ಅಭಿಪ್ರಾಯದ ಪ್ರಕಾರ, ಬೇಲೂರು-ಬಿಕ್ಕೋಡು ಮಾರ್ಗದ ಈ ಪ್ರಮುಖ ರಸ್ತೆ ತಾಲ್ಲೂಕಿನ ನೂರಾರು ಜನರ ದೈನಂದಿನ ಸಂಚಾರ ಮಾರ್ಗವಾಗಿದ್ದು, ಈ ರಸ್ತೆಯ ಸುಧಾರಣೆ ತಕ್ಷಣ ನಡೆಯದಿದ್ದರೆ ಪ್ರಯಾಣಿಕರ ಸುರಕ್ಷತೆಗೆ ಗಂಭೀರ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.