ಮಂಡ್ಯ: ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಯಬೇಕೋ ಬೇಡವೋ ಎಂದು ತೀರ್ಮಾನ ಮಾಡುವ ಉದ್ದೇಶದಿಂದ ಹೈಕೋರ್ಟ್ ಟ್ರಯಲ್ ಬ್ಲಾಸ್ಟ್ ನಡೆಸಲು ಆದೇಶ ನೀಡಿದೆ. ಅದರಂತೆ ಇಂದಿನಿಂದ 4 ದಿನಗಳ ಟ್ರಯಲ್ ಬ್ಲಾಸ್ಟ್ಗೆ ಮುಹೂರ್ತ ಫಿಕ್ಸ್ ಆಗಿದೆ. ಈ ನಡುವೆ ಇದಕ್ಕೆ ತೀವ್ರ ವಿರೋಧ ಸಹ ವ್ಯಕ್ತವಾಗುತ್ತಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯಿಂದ ಹಳೇ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್ಎಸ್ ಅಣೆಕಟ್ಟೆಗೆ ಹಾನಿ ಆಗುತ್ತದೆ ಎಂದು ಹಲವು ಹೋರಾಟಗಳು ನಡೆದವು. ರೈತ ಸಂಘಟನೆಗಳು, ಸಂಸದೆ ಸುಮಲತಾ ಅಂಬರೀಶ್, ಸಾಮಾಜಿಕ ಕಾರ್ಯಕರ್ತರ ಹೋರಾಟದ ಪ್ರತಿಫಲವಾಗಿ ಹೈಕೋರ್ಟ್ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಗೆ ನಿರ್ಬಂಧ ಹೇರಿತ್ತು.
ಇದೀಗ ಇದೇ ಹೈಕೋರ್ಟ್ ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟೆಗೆ ಸಮಸ್ಯೆ ಆಗುತ್ತಾ ಎಂದು ತಿಳಿಯಲು ಟ್ರಯಲ್ ಬ್ಲಾಸ್ಟ್ ಮಾಡಿಸಲು ಸರ್ಕಾರಕ್ಕೆ ಆದೇಶ ನೀಡಿದೆ.ಈ ಸಂಬಂಧ ಹೊರ ರಾಜ್ಯದಿಂದ ತಜ್ಞರ ತಂಡ ಸೋಮವಾರ ರಾತ್ರಿಯೇ ಕೆಆರ್ಎಸ್ನ ರಾಯಲ್ ಆರ್ಕಿಡ್ ಹೊಟೇಲ್ನಲ್ಲಿ ವಾಸ್ತವ್ಯ ಹೂಡಿತ್ತು.
ಇಂದು ಬೆಳಗ್ಗೆ ಕೆಆರ್ಎಸ್ನ ಕಾವೇರಿ ಸಭಾಂಗಣದಲ್ಲಿ ತಜ್ಞರು ಕಾವೇರಿ ನೀರಾವರಿ ನಿಗಮ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಬಳಿಕ ಬೇಬಿ ಬೆಟ್ಟಕ್ಕೂ ತಜ್ಞರು ಭೇಟಿ ನೀಡಲಿದ್ದಾರೆ. ಬುಧವಾರ ಹಾಗೂ ಗುರುವಾರ ಬೇಬಿ ಬೆಟ್ಟದ ಆಯ್ದ ಸ್ಥಳದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲಿದ್ದಾರೆ.