ಬೆಂಗಳೂರು: ವಿಧಾನಸಭೆ, ಲೋಕಸಭೆ, ವಿಧಾನಪರಿಷತ್ ಚುನಾವಣೆಯಲ್ಲಿ ಬುಡಕಟ್ಟು ಸಮುದಾಯಕ್ಕೆ ಪ್ರಾತಿನಿಧ್ಯೆ ನೀಡದೇ ಅನ್ಯಾಯ ಮಾಡಲಾಗಿದ್ದು, ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಸಮುದಾಯದವರನ್ನು ಗುರುತಿಸಿ ನಾಮನಿರ್ದೇಶನ ಮಾಡಬೇಕು. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಎಸ್.ಸಿ/ಎಸ್.ಟಿ, ಅಲೆಮಾರಿ ಘಟಕ ರಚಿಸುವಂತೆ ಎಸ್.ಸಿ/ಎಸ್.ಟಿ, ಅಲೆಮಾರಿ, ವಿಮುಕ್ತ ಬುಡಕಟ್ಟು ಒಕ್ಕೂಟ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಆದರ್ಶ್ ಎಲ್ಲಪ್ಪ, ಅವಕಾಶ ವಂಚಿತ ಅಲೆಮಾರಿ ಜಾತಿಗಳಿಗೆ ರಾಜಕೀಯ ಪಕ್ಷಗಳು ಆದ್ಯತೆ ನೀಡಬೇಕು. ರಾಜ್ಯದಲ್ಲಿ ಅವಕಾಶ ವಂಚಿತ 51-ಎಸ್ಸಿ, 23-ಎಸ್ಟಿ ಅಲೆಮಾರಿ ಜಾತಿಗಳಿದ್ದು, 25ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಈ ಸಮುದಾಯವು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದಿದೆ ಎಂದರು.
ಪಾರಂಪರಿಕ ವೃತ್ತಿ ಅನುಸರಿಸುತ್ತಾ ಅಸಂಘಟಿತ ಸಮುದಾಯವಾಗಿರುವ ನಮಗೆ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ. ರಾಜ್ಯದಲ್ಲಿ ಯಾವುದೇ ಸಂಸದರು, ರಾಜ್ಯಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ/ತಾಲ್ಲೂಕು ಪಂಚಾಯತ್ ಅಧ್ಯಕ್ಷರು ಮತ್ತು ಕನಿಷ್ಠ ಪಕ್ಷ ಸದಸ್ಯರಾಗಿಲ್ಲ. ಕೆ.ಪಿ.ಎಸ್ಸಿ ಸದಸ್ಯತ್ವ ಗಗನ ಕುಸುಮವಾಗಿದೆ. ನಮ್ಮಲ್ಲಿ ಸಂಘಟಕರು, ವಿದ್ವಾಂಸರು, ತಜ್ಞರು, ಅನುಭವಿಗಳು ಇದ್ದರೂ ಸಹ, ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆ ಆಗಲು ಸಾಧ್ಯವಾಗುತ್ತಿಲ್ಲ ಎಂದರು.
ಇತ್ತೀಚೆಗೆ ಎಸ್ಸಿ/ಎಸ್ಟಿ ಅಲೆಮಾರಿ ಅಭಿವೃದ್ದಿ ನಿಗಮ ಸ್ಥಾಪಿಸಲಾಗಿದ್ದರೂ ಸಹ ಸಮರ್ಪಕ ಅನುದಾನ ನೀಡದೇ ವಂಚಿಸಲಾಗುತ್ತಿದೆ. ವಿಧಾನ ಪರಿಷತ್ ಮೂಲಕ ರಾಜಕೀಯ – ಅವಕಾಶ ನೀಡಲು ಇರುವ ಅವಕಾಶವನ್ನು ಮತ್ತೆ ಅಲೆಮಾರಿಗಳ ಹೆಸರಿನಲ್ಲಿ ಅಲೆಮಾರಿಗಳಲ್ಲದ ವ್ಯಕ್ತಿಗಳು ಕಬಳಿಸಲುಹೊಂಚುಹಾಕುತ್ತಿರುವುದು ಖಂಡನೀಯ ಎಂದು ಆದರ್ಶ್ ಯಲ್ಲಪ್ಪ ದೂರಿದರು.ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ವೆಂಕಟೇಶ್ ದೊರ ಮತ್ತಿತರರು ಉಪಸ್ಥಿತರಿದ್ದರು.