ಚಿಕ್ಕಬಳ್ಳಾಪುರ: ಸಮಾಜದ ಕಣ್ಣಾಗಿ ಲೋಕ ಬೆಳಗುವ ಜ್ಞಾನ ಸೂರ್ಯರ ಸ್ಥಾನದಲ್ಲಿರುವ ವಿದ್ಯಾ ಗುರುಗಳಿಗೆ ಅವರ ಇಳಿಸಂಜೆಯಲ್ಲಿ ಗುರುವಂದನೆ ಸಲ್ಲಿಸುವ ಭಾಗ್ಯ ನಮ್ಮದಾಗಿರುವುದು ಪೂರ್ವಜನ್ಮದ ಪುಣ್ಯವಾಗಿದೆ ಮತ್ತು ಇದು ನಮ್ಮ ತಂದೆ ತಾಯಿಗಳ ಆಶೀರ್ವಾದವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಮೀನುಗಾರರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಗಳಾ ಪ್ರಕಾಶ್ ತಿಳಿಸಿದರು.
ನಗರದ ಗಿರಿಯಾಸ್ ಮಳಿಗೆಯ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಜಂಗಮ ಕೋಟೆಯ ಪ್ರೌಢಶಾಲೆಯಲ್ಲಿ 1985ರಲ್ಲಿ ಪಾಠ ಮಾಡಿದ್ದ 6 ಮಂದಿ ಗುರುಗಳಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು ನಾಗರೀಕ ಸಮಾಜದಲ್ಲಿ ಮನುಷ್ಯರಾಗಿ ಹುಟ್ಟಿದ ಪ್ರತಿಯೊಬ್ಬರೂ ಸಹ ಬಾಲ್ಯದಲ್ಲಿ ತಂದೆ ತಾಯಿಗಳ ಆರೈಕೆಯಲ್ಲಿ ಬೆಳೆಯುವ ನಾವು, ಶಾಲೆಗೆ ಸೇರಿದ ಮೇಲೆ ಗುರುಗಳ ಮಾರ್ಗದರ್ಶನದಲ್ಲಿ ಲೋಕವನ್ನು ಕಂಡುಕೊಳ್ಳುವ ಕೆಲಸ ಮಾಡುತ್ತೇವೆ.ಅವರು ತೋರಿದ ಬೆಳಕಲ್ಲಿ ಮುನ್ನಡೆದ ನಾವು, ಹುಡುಗಾಟಿಕೆಯ ಸ್ವಭಾವಕ್ಕೆ ಅಂಕುಶ ಹಾಕುತ್ತಾ ಹಂತಹಂತವಾಗಿ ಸಮಾಜದ ಸತ್ ಪ್ರಜೆಗಳಾಗಿ ರೂಪುಗೊಳ್ಳುತ್ತೇವೆ.
ಪ್ರೌಢಶಿಕ್ಷಣದ ನಂತರ ಕಾಲೇಜಿನ ಮುಖ ಮಾಡುವ ನಾವು ನಮ್ಮ ನಮ್ಮ ಗುರಿ ಉದ್ದೇಶಗಳಿಗೆ ಅನುಸಾರ ಬದುಕು ಕಟ್ಟಿಕೊಳ್ಳುತ್ತೇವೆ.ಇಂದು ನಾವು ಏನೇ ಆಗಿದ್ದರೂ ಅದಕ್ಕು ನೀರು ಗೊಬ್ಬರ ಹಾಕಿ ಬೆಳೆಸಿದ್ದು ಪ್ರಾಥಮಿಕ ಶಾಲೆ, ಪ್ರೌಢಶಾಲೆ ಶಿಕ್ಷಕರೇ ಆಗಿದ್ದಾರೆ. ಅಂತಹ ಗುರುಗಳಿಗೆ ಗೌರವ ಸಮರ್ಪಣೆ ಮಾಡುವುದು ನಮ್ಮ ಕರ್ತವ್ಯವಾಗಬೇಕಿದೆ ಎಂದರು.
ಆಧುನಿಕ ಶಿಕ್ಷಣ ಗುರು ಶಿಷ್ಯರ ಸಂಬಂಧಕ್ಕೆ ಪೂರಕವಾಗಿಲ್ಲ ಎಂಬ ಅನುಮಾನವಿದೆ.ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಗುರುಗಳು ಬರುತ್ತಿದ್ದಾರೆ ಎಂದರೆ ನಾವು ಓಡಿ ಹೋಗಿ ಬಚ್ಚಿಟ್ಟುಕೊಳ್ಳುತ್ತಿದ್ದೆವು.ಆದರೆ ಈಗ ಶಿಷ್ಯರೇ ಗುರುಗಳ ಹೆಗಲ ಮೇಲೆ ಕೈ ಹಾಕಿಕೊಂಡು ಸಾಗುವ ಸಂದರ್ಭ ಕಾಣುತ್ತಿದ್ದೇವೆ.ಇಂತಹ ದುರ್ವರ್ತನೆಯ ಕಾಲ ದೂರವಾಗಿ ಗುರುಗಳನ್ನು ದೇವರಂತೆ ಪೂಜಿಸುವ ಕಾಲ ಆದಷ್ಟು ಬೇಗ ಬರಲಿ ಎಂಬುದೇ ನಮ್ಮ ಆಸೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕನ್ನಡ ಗುರುಗಳಾದ ಚಿಕ್ಕಪ್ಪಯ್ಯ ಇವತ್ತಿನ ಗುರುಗಳಲ್ಲಿ ಸಮರ್ಪಣಾ ಮನೋಭಾವ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ. ಶಿಷ್ಯರಲ್ಲಿ ಕೂಡ ಕಲಿಕೆಯ ಮನಸ್ಥಿತಿ ಇಲ್ಲವಾಗುತ್ತಿರುವುದು ಸಹ ಬೇಸರದ ವಿಚಾರ.ಇವೆರಡೂ ಅತಿಗಳ ನಡುವೆ ಗುರುವಂದನಾ ಕಾರ್ಯಕ್ರಮದಂತಹ ಸಂಸ್ಕೃತಿ ಜೀವಂತವಾಗಿರುವುದು ಸಂತೋಷ ಪಡುವ ಸಂಗತಿ. ಎಂದೋ ಪಾಠ ಮಾಡಿದ ಗುರುಗಳನ್ನು ನೆನಪಿಟ್ಟುಕೊಂಡು ಎಲ್ಲೆಲ್ಲಿದ್ದೋ ನಮ್ಮನ್ನು ಒಂದು ವೇದಿಕೆಗೆ ಕರೆಸಿಕೊಂಡು ಗೌರವಿಸುವುದು ದೊಡ್ಡ ಕೆಲಸ.
ಮಕ್ಕಳ ಏಳಿಗೆಯನ್ನಷ್ಟೇ ಮನಸ್ಸಿನಲ್ಲಿ ಇಟ್ಟುಕೊಂಡು ಸೇವೆ ಸಲ್ಲಿಸಿದ ನಮಗೆ ವಿದ್ಯಾರ್ಥಿಗಳ ಕೈಯಲ್ಲಿ ಸನ್ಮಾನ ಮಾಡಿಸಿಕೊಳ್ಳುತ್ತಿರುವುದು ಸೇವೆಗೆ ಸಂದ ದೊಡ್ಡ ಗೌರವವಾಗಿದೆ.ಇಂತಹ ಉತ್ತಮ ಕೆಲಸ ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ಅಭಿನಂದನೆಗೆ ಅರ್ಹರಾಗಿದ್ದಾರೆ.ಇಂತಹ ವಿದ್ಯಾರ್ಥಿಗಳ ಸಂತತಿ ಹೆಚ್ಚಲಿ,ನೀವು ಬಯಸಿದ ಬದುಕು ನಿಮಗೆ ಎಲ್ಲಾ ನೀಡಲಿ ಎಂದು ಆರ್ಶೀವಾದಿಸಿದರು.1985 ರಲ್ಲಿ ಎಸ್ಎಸ್ಎಲ್ಸಿ ಓದಿದ ವಿದ್ಯಾರ್ಥಿಗಳಿಗೆ ಕನ್ನಡ ವಿಷಯ ಬೋಧಿಸಿದ ಚಿಕ್ಕಪ್ಪಯ್ಯ,ವಿಜ್ಞಾನ ವಿಷಯದ ಶಿಕ್ಷಕ ವಿ.ರಾಜಗೋಪಾಲ್,ಸಮಾಜವಿಜ್ಞಾನ ಶಿಕ್ಷಕ ರಾಜಪ್ಪ,ಇಂಗ್ಲೀಷ್ ಶಿಕ್ಷಕ ನಾಗರಾಜ್,ಕ್ರಾಪ್ಟ್ ಶಿಕ್ಷಕ ಚಂದ್ರಶೇಖರ್ ಗುರುಗಳಿಗೆ ಹಣ್ಣು ಹಂಪಲು ಸಹಿತ ಹಾರತುರಾಯಿ ಹಾಕಿ ಶಾಲು ಹೊದಿಸಿ ಸ್ಮರಣಿಕೆ ಜತೆಗೆ ಮೈಸೂರು ಪೇಟ ತಲೆಗೆ ತೊಡಿಸಿ ಟೈಟಾನ್ ಕೈಗಡಿಯಾರಗಳನ್ನು ನೆನಪಿನ ಕಾಣಿಕೆಯಾಗಿ ನೀಡಿ ಸನ್ಮಾನಿಸಲಾಯಿತು.
1985ನೇ ಸಾಲಿನಲ್ಲಿ ಶಿಡ್ಲಘಟ್ಟ ತಾಲೂಕು ಜಂಗಮಕೋಟೆಯ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಾಸಾಂಗ ಮಾಡಿದ್ದ ಮಂಗಳ ಪ್ರಕಾಶ್, ಎಂ.ನಾರಾಯಣಸ್ವಾಮಿ ಸಹಾಯಕ ಆಯುಕ್ತರು,ಎನ್ ನಾರಾಯಣಸ್ವಾಮಿ ಜಿ.ಪಂ. ಪ್ರೊಜೆಕ್ಟ್ ಡೈರೆಕ್ಟರ್, ತಮ್ಮಣ್ಣ ಟಿಪಿಎಸ್ ಸದಸ್ಯ ,ಲಕ್ಷ್ಮಣ ಮೂರ್ತಿ, ತಮ್ಮಣ್ಣ, ಗೋಪಾಲ್, ಪುಟ್ಟರಾಜು, ಸಿದ್ದಾಚಾರಿ, ಸೌಭಾಗ್ಯ ಸೇರಿ ಇತರರಿಗೂ ಸನ್ಮಾನಿಸಿದರು.