ನವದೆಹಲಿ: ಇಲ್ಲಿನ ಪಟೇಲ್ ಚೌಕ್ನಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಪ ರಾಷ್ಟ್ರಪತಿ ಜಗದೀಪ್ ಧನ್ಖರ್, ದೆಹಲಿ ಎಲ್ಜಿ ವಿಕೆ ಸಕ್ಸೇನಾ ಮತ್ತು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಪುಷ್ಪ ನಮನ ಸಲ್ಲಿಸಿದರು.
ಪಟೇಲ್ ಅವರದ್ದು ಅದಮ್ಯ ಮನೋಭಾವ, ದೂರದೃಷ್ಟಿಯ ರಾಜಕಾರಣಿ ಮತ್ತು ಅವರು ನಮ್ಮ ದೇಶದ ಭವಿಷ್ಯವನ್ನು ರೂಪಿಸಿದ ಅಸಾಧಾರಣ ಸಮರ್ಪಣೆಯನ್ನು ನಾವು ನೆನಪಿಸಿಕೊಳ್ಳುತ್ತೇವೆ. ರಾಷ್ಟ್ರೀಯ ಏಕತೆಗೆ ಅವರ ಕೊಡುಗೆ, ಬದ್ಧತೆ ನಮಗೆ ಮಾರ್ಗದರ್ಶನ ನೀಡುತ್ತಲೇ ಬಂದಿದೆ, ಅವರ ಸೇವೆಗೆ ನಾವು ಸದಾ ಋಣಿಯಾಗಿರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಪೋಸ್ಟ್ ಮಾಡಿದ್ದಾರೆ.
ಉಕ್ಕಿನ ಮನುಷ್ಯನ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸರ್ದಾರ್ ಪಟೇಲ್ ಜಯಂತಿ ಸಂದರ್ಭದಲ್ಲಿ ದೇಶದ ಜನತೆಗೆ ಏಕತಾ ದಿನದ ಶುಭಾಶಯಗಳನ್ನು ಹೇಳುತ್ತೇನೆ. 2014 ರಿಂದ ಇಡೀ ದೇಶವು ಈ ದಿನವನ್ನು ಏಕತಾ ದಿನವಾಗಿ ಆಚರಿಸುತ್ತದೆ.
ಸ್ವಾತಂತ್ರ್ಯದ ನಂತರ ಬ್ರಿಟಿಷರು ಭಾರತ ತೊರೆದರು ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಸಮಯಲ್ಲಿ ಪಟೇಲ್ ಅವರು ಕೆಲವೇ ದಿನಗಳಲ್ಲಿ ರಾಜರ ಆಡಳಿತದಲ್ಲಿದ್ದ 550ಕ್ಕೂ ಹೆಚ್ಚು ರಾಜ್ಯಗಳನ್ನು ಒಗ್ಗೂಡಿಸಿ ಭಾರತದ ಭೂಪಟವನ್ನು ಸಿದ್ಧಪಡಿಸುವ ಕೆಲಸ ಮಾಡಿದ್ದರು ಎಂದು ಹೇಳಿದರು