ಬೆಳಗಾವಿ: ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡುವುದನ್ನು ತಡೆಯಲು ಯತ್ನಿಸಿದ್ದ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದ ಸಾರ್ವಜನಿಕರಿಗೆ ಬೆಳಗಾವಿ ನಗರ ಪೊಲೀಸರು ಸನ್ಮಾನಿಸಿ, ಪ್ರಶಂಸನೀಯ ಪತ್ರ ನೀಡಿ ಅಭಿನಂದಿಸಿದ್ದಾರೆ. ನಗರದ ಪೊಲೀಸ್ ಮೈದಾನದಲ್ಲಿ ಜನರಲ್ ಪೊಲೀಸ್ ಪರೇಡ್ ನಡೆಯಿತು.
ಬಳಿಕ ವಂಟಮೂರಿ ಗ್ರಾಮದ ನಿವಾಸಿ ಜಹಾಂಗೀರ್ ತಹಶಿಲ್ದಾರ, ವಾಸೀಂಮ್ ಮಕಾನದಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ಹೊಳಿಕಾರ್ ಅವರಿಗೆ ಸನ್ಮಾನಿಸಲಾಯಿತು.ಈ ವೇಳೆ ಕೋರ್ಟ್ ನೀಡಿದ್ದ ಪ್ರಶಂಸನೀಯ ಪತ್ರವನ್ನು ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರು ಜಹಾಂಗೀರ್ ಎಂಬುವವರಿಗೆ ನೀಡಿ ಗೌರವಿಸಿದರು. ಮೂವರಿಗೆ ತಲಾ ಐದು ಸಾವಿರ ರೂಪಾಯಿ ನಗದು ಬಹುಮಾನ ವಿತರಿಸಲಾಯಿತು.
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಘಟನೆ ತಡೆದ ಕಾಕತಿ ಠಾಣೆಯ ಪಿಎಸ್ಐ ಮಂಜುನಾಥ್ ಹುಲಕುಂದ ಸೇರಿ ಆರು ಜನ ಸಿಬ್ಬಂದಿಯನ್ನೂ ಸಹ ಸನ್ಮಾನಿಸಿ ಗೌರವಿಸಲಾಯಿತು.ವಂಟಮೂರಿ ಗ್ರಾಮದಲ್ಲಿ ನಡೆದಿದ್ದ ಘಟನೆ ತಡೆದವರಿಗೆ ಸನ್ಮಾನ ಮಾಡಿದ್ದೇವೆ. ವಂಟಮೂರಿ ಗ್ರಾಮದ ಮೂವರು ಸಾರ್ವಜನಿಕರಿಗೆ ಸನ್ಮಾನ ಮಾಡಿದ್ದೇವೆ.
ಕೋರ್ಟ್ ನೀಡಿದ್ದ ಪ್ರಶಂಸನೀಯ ಪತ್ರ ಕೂಡ ನೀಡಿ ಗೌರವಿಸಿದ್ದೇವೆ. ಕಾಕತಿ ಠಾಣೆ ಪಿಎಸ್ಐ ಸೇರಿ ಆರು ಜನರಿಗೆ ಸನ್ಮಾನ ಮಾಡಿದ್ದೇವೆ. ಪಿಎಸ್ಐಗೆ ಐದು ಸಾವಿರ ನಗದು, ಉಳಿದು ಐದು ಜನ ಸಿಬ್ಬಂದಿಗೆ ನಾಲ್ಕು ಸಾವಿರ ಬಹುಮಾನ ನೀಡಿದ್ದೇವೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಹೇಳಿದ್ದಾರೆ.ಮಾಹಿತಿ ನೀಡಿದ್ದ ಮೂರು ಜನ ಸಾರ್ವಜನಿಕರಿಗೆ ಏನೂ ತೊಂದರೆ ಆಗದಂತೆ ರಕ್ಷಣೆ ನೀಡುತ್ತೇವೆ. ಯಾವುದೇ ಅಹಿತಕರ ಘಟನೆ ನಡೆದಾಗ ಭಯ ಪಡದೇ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿ ಎಂದು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.