ಇಂದು ಭಾಷಾಜ್ಞಾನವನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಸಂಗತಿಯನ್ನು ಎಷ್ಟರಮಟ್ಟಿಗೆ ರಾಜಕೀಯಗೊಳಿಸಲಾಗಿದೆಯೆಂದರೆ, ಸರ್ಕಾರಗಳು ಬದಲಾದಂತೆಲ್ಲ ಕಲಿಕಾಕ್ರಮದ ಬದಲಾವಣೆ, ವಿದ್ಯಾರ್ಥಿಗಳಿಗಂತೂ ಗೊಂದಲದ ಬವಣೆ ಎಂಬಂತಾಗಿದೆ. ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ಭಾಷಾ ನೀತಿ ಎಂಬುದು ಕೇವಲ ಪಠ್ಯಕ್ರಮದ ವಿಷಯವಾಗಿ ಉಳಿಯದೆ, ಸಾಂಸ್ಕೃತಿಕ ಅಸ್ಮಿತೆ ಮತ್ತು ರಾಜಕೀಯ ಸಂಘರ್ಷಗಳ ಕೇಂದ್ರಬಿAದುವಾಗಿ ದಶಕಗಳಿಂದಲೂ ಚರ್ಚಿತವಾಗುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರವು ಎಸ್ಎಸ್ಎಲ್ಸಿ ಅಂಕಪಟ್ಟಿಯಿಂದ ತೃತೀಯ ಭಾಷೆಯ ಅಂಕಗಳನ್ನು ಹೊರಗಿಟ್ಟು, ಕೇವಲ `ಗ್ರೇಡಿಂಗ್’ ವ್ಯವಸ್ಥೆಯನ್ನು ಜಾರಿಗೆ ತಂದಿರುವುದನ್ನು ಒಂದು ಐತಿಹಾಸಿಕ ಪಲ್ಲಟಕ್ಕೆ ನಾಂದಿ ಹಾಡಿದ ಕ್ರಮವೆಂಬಂತೆ ಬಿಂಬಿಸಲಾಗುತ್ತಿದೆ. ಶಿಕ್ಷಣ ಸಚಿವರ ಈ ನಿರ್ಧಾರವನ್ನು ಒಂದು ಕಡೆ ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡವನ್ನು ತಗ್ಗಿಸುವ ‘ಮಾನವೀಯ’ ಕ್ರಮವಾಗಿಯೂ, ಮತ್ತೊಂದೆಡೆ ಕೇಂದ್ರದ `ಹಿಂದಿ ಹೇರಿಕೆ’ಯ ವಿರುದ್ಧದ ಮೌನ ಪ್ರತಿರೋಧ ಮತ್ತು `ಕನ್ನಡ ಪ್ರಥಮ’ ಎಂಬ ರಾಜ್ಯ ಶಿಕ್ಷಣ ನೀತಿಯ ದೃಢ ಸಂಕಲ್ಪಕ್ಕೆ ಕನ್ನಡಿ ಎಂಬಂತೆಯೂ ಸಮರ್ಥನೆಗೈಯಲಾಗುತ್ತಿದೆ. ಆದರೆ ದಿಟವಾಗಿಯೂ ಇದು ಅಂಕಗಳ ಹೊರೆಯಿಳಿಕೆಯ ಹಾಗೂ ಹಿಂದಿ ಹೇರಿಕೆಗೆ ಸೆಡ್ಡುಹೊಡೆದ ಕ್ರಮವೆಂಬಂತೆ ನೋಡಬೇಕೆ? ಬಹುಭಾಷಾ ಕಲಿಕೆ: ಬೌದ್ಧಿಕ ವಿಕಸನದ ಅಪೂರ್ವ ಅವಕಾಶ
ಭಾಷಾ ಕಲಿಕೆಯನ್ನು ಕೇವಲ ಪರೀಕ್ಷೆಯ ಅಂಕಗಳಿಗೆ ಸೀಮಿತಗೊಳಿಸಿ ನೋಡುವುದು ಸಂಕುಚಿತ ದೃಷ್ಟಿಕೋನವಾದೀತು. ನರವಿಜ್ಞಾನದ ಪ್ರಕಾರ, ಬಾಲ್ಯ ಮತ್ತು ಹದಿಹರೆಯದ ಅವಧಿಯು ಮೆದುಳಿನ ವಿಕಸನಕ್ಕೆ ಅತ್ಯಂತ ಪ್ರಶಸ್ತವಾದ ಕಾಲ. ಈ ಹಂತದಲ್ಲಿ ಮಗು ಎಷ್ಟು ಹೆಚ್ಚು ಭಾಷೆಗಳನ್ನು ಕಲಿಯುತ್ತದೆಯೋ, ಅಷ್ಟು ಅದರ ಮೆದುಳಿನ ‘ನ್ಯೂರೋಪ್ಲಾಸ್ಟಿಸಿಟಿ’ ವೃದ್ಧಿಸುತ್ತದೆ. ಹಾರ್ವರ್ಡ್ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾಲಯಗಳ ಸಂಶೋಧನಾ ವರದಿಗಳು ಪುಷ್ಟೀಕರಿಸುವಂತೆ, ಬಹುಭಾಷಾ ಕಲಿಕೆಯು ಕೇವಲ ಸಂವಹನಕ್ಕೆ ಮಾತ್ರವಲ್ಲದೆ, ಮಗುವಿನ ತಾರ್ಕಿಕ ಆಲೋಚನೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಗಮನಾ ರ್ಹವಾಗಿ ಹೆಚ್ಚಿಸುತ್ತದೆ. ಹಿಂದಿಯ ತಹ ಹೆಚ್ಚುವರಿ ಭಾಷೆಯನ್ನು ಕಲಿಯುವುದು ವಿದ್ಯಾರ್ಥಿಗೆ ಹೊರೆಯಾಗುವ ಬದಲು, ಮೆದುಳನ್ನು ಸದಾ ಕಾರ್ಯ ಪ್ರವೃತ್ತವಾಗಿಡುವಂತಹ ಒಂದು ‘ಬೌದ್ಧಿಕ ವ್ಯಾಯಾಮ’ ವೆಂಬAತೆ ಭಾವಿಸ ಬೇಕಿದೆ. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಬಲ್ಲ ವಿದ್ಯಾರ್ಥಿಗಳಲ್ಲಿ ‘ಎಕ್ಸಿಕ್ಯೂಟಿವ್ ಫಂಕ್ಷನ್’ ಅಂದರೆ ಏಕಕಾಲದಲ್ಲಿ ಹಲವು ವಿಷಯಗಳ ಮೇಲೆ ಗಮನ ಹರಿಸುವ ಗುಣ ಹೆಚ್ಚಿರುತ್ತದೆ. ಅಲ್ಲದೆ, ವಿವಿಧ ಭಾಷೆಗಳ ಪದಸಂಪತ್ತು ಮತ್ತು ವ್ಯಾಕರಣದ ಪರಿಚಯವು ಆತನ ಸೃಜನಶೀಲತೆಯನ್ನು ಇಮ್ಮಡಿಗೊಳಿಸುತ್ತದೆ. ಜಾಗತಿಕ ಮಟ್ಟದ ಶೈಕ್ಷಣಿಕ ಅಧ್ಯಯನಗಳು ಹೇಳುವಂತೆ, ಚಿಕ್ಕ ವಯಸ್ಸಿನಲ್ಲಿ ಕಲಿಯುವ ಭಾಷೆಗಳು ಭವಿಷ್ಯದಲ್ಲಿ ಉದ್ಯೋಗಾವಕಾಶಗಳನ್ನು ವಿಸ್ತರಿಸುವುದಲ್ಲದೆ, ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಆದ್ದರಿಂದ, ಪರೀಕ್ಷೆಯ ಅಂಕಗಳ ಅಳತೆಗೋಲಿನಿಂದ ಹೊರಬಂದು ನೋಡಿದರೆ, ತ್ರಿಭಾಷಾ ಸೂತ್ರವು ವಿದ್ಯಾರ್ಥಿಯ ಜ್ಞಾನದ ಹರವನ್ನು ವಿಸ್ತರಿಸುವ ಒಂದು ಜ್ಞಾನಯಜ್ಞದಂತಿದೆ. ಭಾಷೆಯನ್ನು ಕಲಿಕೆಯ ಭಾಗವಾಗಿ ಉಳಿಸಿಕೊಳ್ಳುವುದು ಮುಂದಿನ ತಲೆಮಾರಿನ ಬೌದ್ಧಿಕ ಸಂಪತ್ತನ್ನು ವೃದ್ಧಿಸುವ ಮಹತ್ವಪೂರ್ಣ ದಾರಿಯಾಗಿದೆ. ಅಂತರಾಷ್ಟ್ರೀಯ ಸಂಶೋಧನೆಗಳ ಬೆಳಕಿನಲ್ಲಿ ಬಹುಭಾಷಾ ಕಲಿಕೆಬಾಲ್ಯದಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯುವುದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕ ಎಂಬ ಅಂಶವನ್ನು ಅಮೇರಿಕಾ ಮತ್ತು ಯುರೋಪಿಯನ್ ರಾಷ್ಟ್ರಗಳ ಹಲವಾರು ಅಧಿಕೃತ ಸಂಶೋಧನೆಗಳು ಕಾಲಕಾಲಕ್ಕೆ ಸಾಬೀತುಪಡಿಸಿವೆ. ಅಮೇರಿಕಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ತನ್ನ 2017 ಮತ್ತು 2022ರ ವರದಿಗಳಲ್ಲಿ ಬಹುಭಾಷಾ ಕಲಿಕೆಯು ಮೆದುಳಿನ ‘ಎಕ್ಸಿಕ್ಯೂಟಿವ್ ಫಂಕ್ಷನ್’ ಅನ್ನು ಬಲಪಡಿಸುತ್ತದೆ ಎಂದು ದೃಢಪಡಿಸಿದೆ. ಅಂದರೆ, ಇಂತಹ ಮಕ್ಕಳು ಏಕಕಾಲದಲ್ಲಿ ಹಲವು ಕೆಲಸಗಳನ್ನು ನಿಭಾಯಿಸುವಲ್ಲಿ ಮತ್ತು ಅನಗತ್ಯ ಮಾಹಿತಿಗಳನ್ನು ಬದಿಗೊತ್ತಿ ಮುಖ್ಯ ವಿಷಯದ ಮೇಲೆ ಗಮನ ಕೇಂದ್ರೀಕರಿಸುವಲ್ಲಿ ಏಕಭಾಷಿಕರಿಗಿಂತ ಹೆಚ್ಚು ಸಮರ್ಥರಾಗಿರುತ್ತಾರೆ. ಯುರೋಪಿಯನ್ ಒಕ್ಕೂಟದ ಮತ್ತು ಪಾಲಿಟೆಕ್ನಿಕ್ ಇನ್ಸೆಂಟ್ಸ್ ಹಂಚಿಕೊಂಡ 2023ರ ದತ್ತಾಂಶಗಳAತೆ, ಬಾಲ್ಯದಲ್ಲೇ ಎರಡನೇ ಅಥವಾ ಮೂರನೇ ಭಾಷೆಗೆ ತೆರೆದುಕೊಳ್ಳುವವರ ಮೆದುಳು ಹೆಚ್ಚು ‘ಪ್ಲಾಸ್ಟಿಟಿಸಿಟಿ’ ಅಥವಾ ಹೊಂದಿಕೊಳ್ಳುವ ಗುಣವನ್ನು ಹೊಂದಿರುತ್ತದೆ. ಇದು ವಯಸ್ಸಾದಂತೆ ಕಾಡುವ ಅಲ್ಝೈಮರ್ಸ್ನಂತಹ ಮರೆವಿನ ಕಾಯಿಲೆಗಳನ್ನು ಸುಮಾರು 4-5 ವರ್ಷಗಳಷ್ಟು ವಿಳಂಬಗೊಳಿಸುವ ಮುಖೇನ ಮುಂದೂಡಲ್ಪಡುವ ಕೆಲಸಮಾಡುವುದೆಂದು ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ 2016ರ ಅಧ್ಯಯನ ಕೂಡ ಹೇಳಿದೆ. ಅಲ್ಲದೆ, (2024) ರ “ಭಾಷೆಗಳು ಮುಖ್ಯ: ಬಹುಭಾಷಾ ಶಿಕ್ಷಣದ ಕುರಿತ ಜಾಗತಿಕ ಮಾರ್ಗದರ್ಶಿ” ಎಂಬ ಶೀರ್ಷಿಕೆಯುಳ್ಳ ವರದಿಯು, ಬಹುಭಾಷಾ ಶಿಕ್ಷಣವು ಸಾಮಾಜಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸುವುದಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಉತ್ತಮಗೊಳಿಸುತ್ತದೆ ಎಂದು ಒತ್ತಿ ಹೇಳಿದೆ. ಯುರೋಪಿನ ‘ಯುರೋಪಿಯನ್ ಸ್ಕೂಲ್ಸ್’ ಮಾದರಿಯು ದಶಕಗಳಿಂದಲೂ ವಿದ್ಯಾರ್ಥಿಗಳಿಗೆ ಕನಿಷ್ಠ ಮೂರು ಭಾಷೆಗಳನ್ನು ಕಲಿಸುವುದನ್ನು ಕಡ್ಡಾಯಗೊಳಿಸಿದ್ದು, ಇದು ಅವರಲ್ಲಿ ಜಾಗತಿಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ಅತ್ಯಂತ ಸಹಕಾರಿಯಾಗಿದೆ ಎಂದು ತನ್ನ 2021ರ ಪಠ್ಯಕ್ರಮ ವಿಶ್ಲೇಷಣೆಯಲ್ಲಿ ತಿಳಿಸಿದೆ. ಈ ಎಲ್ಲ ಪುರಾವೆಗಳು ಭಾಷಾ ಕಲಿಕೆಯನ್ನು ಕೇವಲ ಅಂಕಗಳಿಕೆಯ ಓಟವಾಗಿ ನೋಡದೆ, ಅದನ್ನು ಜೀವನಪರ್ಯಂತ ಸಂಪಾದಿಸಬಹುದಾದ ಬೌದ್ಧಿಕ ಸಂಪತ್ತು ಎಂದು ಪರಿಗಣಿಸಬೇಕಾದ ಅಗತ್ಯವನ್ನು ಸಾರಿ ಸಾರಿ ಹೇಳಿದಂತಿದೆ.
ಕಲಿಕೆಯ ಹಂತದ ಅಪಮೌಲ್ಯೀಕರಣ ಮತ್ತು ಕರಾವಳಿಯ ಬಹುಭಾಷಾ ಮಾದರಿ
ಕರ್ನಾಟಕ ಸರ್ಕಾರದ ಈ ಇತ್ತೀಚಿನ ನಿರ್ಧಾರವು ಪರೀಕ್ಷಾ ಹೊರೆಯ ನೆಪದಲ್ಲಿ ಅತ್ಯಂತ ನಿರ್ಣಾಯಕವಾದ ‘ಕಲಿಕೆಯ ಹಂತ’ವನ್ನೇ ಅಪಮೌಲ್ಯೀಕರಿಸುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಮೂಡುತ್ತದೆ. ಬಾಲ್ಯದಲ್ಲಿ ಎಷ್ಟು ಹೆಚ್ಚು ಭಾಷೆಗಳನ್ನು ಕಲಿಯುತ್ತೇವೆಯೋ ಅಷ್ಟು ನಮ್ಮ ಮೆದುಳು ಚುರುಕಾಗುತ್ತದೆ ಎಂಬುದು ವಿಜ್ಞಾನ ಸಾರಿದ ಸತ್ಯ. ಇದಕ್ಕೆ ಜೀವಂತ ಉದಾಹರಣೆ ನಮ್ಮ ಕರಾವಳಿ ಕರ್ನಾಟಕದ ಮಂಗಳೂರು ಮತ್ತು ಉಡುಪಿ ಭಾಗದ ಜನರು. ಅಲ್ಲಿನವರು ತುಳು ಭಾಷಿಗರಾಗಿದ್ದರೂ ಕನ್ನಡ, ಕೊಂಕಣಿ, ಬ್ಯಾರಿ, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಅನಾಯಾಸವಾಗಿ ನಿಭಾಯಿಸುತ್ತಾರೆ. ಈ ಬಹುಭಾಷಾ ಸಾಮರ್ಥ್ಯವೇ ಅವರನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚು ಬುದ್ಧಿವಂತರು ಮತ್ತು ಹೊಂದಿಕೊಳ್ಳುವ ಸ್ವಭಾವದವರನ್ನಾಗಿ ಮಾಡಿದೆ. ಆದರೆ, ಇಂದಿನ ನಿರ್ಧಾರವು ತೃತೀಯ ಭಾಷೆಯನ್ನು ಕೇವಲ ‘ಗ್ರೇಡಿಂಗ್’ಗೆ ಸೀಮಿತಗೊಳಿಸುವ ಮೂಲಕ ಅದರ ಗಾಂಭೀರ್ಯವನ್ನೇ ಕಳೆದುಹಾಕುತ್ತಿದೆ.
ಇದೇ ಮಾದರಿಯನ್ನು ನಾಳೆ ಐಸಿಎಸ್ಇ ಅಥವಾ ಸಿಬಿಎಸ್ಇ ಮಂಡಳಿಗಳು ಅನುಸರಿಸಿ ಕನ್ನಡವನ್ನು ಕೇವಲ ‘ಗ್ರೇಡ್’ ವಿಷಯವನ್ನಾಗಿ ಮಾಡಿದರೆ, ರಾಜ್ಯಕ್ಕೆ ಬರುವ ವಲಸಿಗರು ಕನ್ನಡವನ್ನು ಎಂದಿಗೂ ಗಂಭೀರವಾಗಿ ಕಲಿಯಲು ಮುಂದಾಗುವುದಿಲ್ಲ. ಇದರಿಂದ ಕನ್ನಡದ ಅಸ್ಮಿತೆಗೆ ದೀರ್ಘಕಾಲೀನ ಪೆಟ್ಟು ಬೀಳುವ ಸಾಧ್ಯತೆಯಿದೆ. ಜ್ಞಾನಯಜ್ಞದ ಈ ಪಡಸಾಲೆಯಲ್ಲಿ ಸರ್ಕಾರವು ಕೇವಲ ಹಿಂದಿಯನ್ನು ವಿರೋಧಿಸುವ ಬದಲಿಗೆ, ತೃತೀಯ ಭಾಷೆಯ ಪಟ್ಟಿಯಲ್ಲಿ ರಾಜ್ಯದ ಸ್ಥಳೀಯ ಭಾಷೆಗಳಾದ ತುಳು, ಕೊಡವ, ಕೊಂಕಣಿ ಅಥವಾ ಸಂಸ್ಕೃತದಂತಹ ಭಾಷೆಗಳನ್ನು ಸೇರಿಸಿ, ಅವುಗಳಿಗೆ ಬಲವಾದ ಪಠ್ಯಕ್ರಮ ರೂಪಿಸಿದ್ದರೆ ಅದು ನಿಜವಾದ ‘ಆದರ್ಶ ನಡೆ’ಯಾಗುತ್ತಿತ್ತು. ಭಾಷೆಯನ್ನು ಶಿಕ್ಷಣದಿಂದ ದೂರವಿಡುವುದು ಪರಿಹಾರವಲ್ಲ, ಬದಲಿಗೆ ವೈವಿಧ್ಯಮಯ ಭಾಷೆಗಳನ್ನು ಆಯ್ಕೆಯಾಗಿ ನೀಡಿ ಮಕ್ಕಳ ಬೌದ್ಧಿಕ ಹರವನ್ನು ವಿಸ್ತರಿಸುವುದು ದೂರದೃಷ್ಟಿಯ ಲಕ್ಷಣ. ಈ ಮೂಲಕ ಮಾತ್ರ ನಾವು ಕನ್ನಡಿಗರನ್ನು ಕೇವಲ ಪ್ರಾದೇಶಿಕವಾಗಿ ಅಲ್ಲದೆ, ಜಾಗತಿಕವಾಗಿಯೂ ಬಲಿಷ್ಠರನ್ನಾಗಿ ಮಾಡಲು ಸಾಧ್ಯ. ಈ ಸತ್ಯವನ್ನು ಸರ್ಕಾರಗಳು ಆದಷ್ಟು ಬೇಗ ಅರಿಯಲೆಂಬುದೇ ಎನ್ನಾಶಯ.
ಲೇಖಕರು
-ಸೋಮೇಶ್ವರ ಆರ್ ಗುರುಮಠ
ಸಂಶೋಧನಾ ವಿದ್ಯಾರ್ಥಿ,
ಮಣಿಪಾಲ ಬೆಂಗಳೂರು
ರಾಜಕೀಯ ಪಲ್ಲಟಗಳ ಪಡಸಾಲೆಯಲ್ಲಿ ತ್ರಿಭಾಷಾ ಸೂತ್ರವೆಂಬ ಜ್ಞಾನಯಜ್ಞ



