ಸರಿಸುಮಾರು 21 ಬಿಲಿಯನ್ ಡಾಲರ
ಹಣವನ್ನು ಆತ ದಾನವಾಗಿ ನೀಡಿದ…. ಅದೊಂದು ದಿನ ನಸುಕಿನ ಜಾವದಲ್ಲಿ ಅಮೆರಿಕಾ ದೇಶದ ಕ್ಯಾಲಿಫೋರ್ನಿಯ ರಾಜ್ಯದ ಸ್ಟ್ಯಾನ್ ಫೋರ್ಡ್ ಡೋರ್ಮ್ ಎಂಬ ಊರಿನಲ್ಲಿ ತನ್ನ ಐಷಾರಾಮಿ ಮನೆಯಲ್ಲಿ ಮಲಗಿದ್ದ ಆತನ ಮನೆಯಲ್ಲಿದ್ದ ಫೋನ್ನ ಕರೆ ಆತನನ್ನು ಎಬ್ಬಿಸಿತು. ಅತ್ತ ಕಡೆಯಿಂದ ಕೇಳಿದ ವಾರ್ತೆ ಆತನ ಇಡೀ ಬದುಕನ್ನು ಪಲ್ಲಟಗೊಳಿಸಿತು… ಅದು ಆತನ ತಂದೆ ತೀವ್ರ ಹೃದಯಾಘಾತದಿಂದ ಮರಣವಾದ ವಿಷಯವನ್ನು ತಿಳಿಸುವ ಕರೆಯಾಗಿತ್ತು. ಯಾವುದೇ ಕಾಯಿಲೆಯ ಲಕ್ಷಣವೂ ಇಲ್ಲದ, ಯಾವುದೇ ರೀತಿಯ ಮುನ್ಸೂಚನೆ ಇಲ್ಲದೆ, ವಿದಾಯದ ಒಂದು ಮಾತನ್ನು ಹೇಳದೆ ಆತನ ತಂದೆ ದಿಢೀರ್ ಎಂದು ಈ ಜಗತ್ತಿನಿಂದ ಕಣ್ಮರೆಯಾದದ್ದು ಅವರಿಗೆ ಕಾಲ ಕೆಳಗಿನ ನೆಲವೇ ಕುಸಿದಂತೆ ಭಾಸವಾಗಿತ್ತು.
ತಮ್ಮ 21ನೇ ವಯಸ್ಸಿನಲ್ಲಿ ಬಹಳಷ್ಟು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಮಧ್ಯಂತರ ಪರೀಕ್ಷೆಗಳನ್ನು ಹೀಗೆ ಎದುರಿಸಬೇಕು ಹಾಗೂ ವಾರಾಂತ್ಯದ ದಿನಗಳನ್ನು ಹೇಗೆ ಕಳೆಯಬೇಕು ಎಂದು ಯೋಚಿಸಿದರೆ ಅಜೀಮ್ ಅವರಿಗೆ ತಮ್ಮ ಆ ವಯಸ್ಸಿನಲ್ಲಿ ಭಾರತ ದೇಶದಲ್ಲಿ ಇರುವ ನೂರಾರು ಕುಟುಂಬಗಳ ಮುಂದಿನ ಬದುಕಿನ ಕುರಿತ ಯೋಚನೆ ಕಾಡುತ್ತಿತ್ತು…ಅವರ ಬದುಕು ಅಡುಗೆ ಎಣ್ಣೆಯ ತಯಾರಿಕೆಯ ಕಂಪನಿಯ ನಿರ್ವಹಣೆಯ ಮೇಲೆ ನಿಂತಿತ್ತು ಹಾಗೂ ಇದುವರೆಗೂ ನಡೆಸದ ಆ ಕಂಪನಿಯ ಜವಾಬ್ದಾರಿ ಅವರ ಹೆಗಲ ಮೇಲೇರಿತ್ತು.
ಅವರು ತಮ್ಮ ಇಂಜಿನಿಯರಿಂಗ್ ಪಠ್ಯಪುಸ್ತಕಗಳನ್ನು ಬಾಕ್ಸ್ ಗಳಲ್ಲಿ ತುಂಬಿ ಅಮೆರಿಕದ ಸಿಲಿಕಾನ್ ವ್ಯಾಲಿಯ ತಮ್ಮ ಕನಸುಗಳಿಗೆ ಗುಡ್ ಬೈ ಹೇಳಿ ಭಾರತ ದೇಶಕ್ಕೆ ಮರಳಿದರು. ತನ್ನ ತಂದೆಯ ವೆಸ್ಟರ್ನ್ ಇಂಡಿಯನ್ ವೆಜಿಟೇಬಲ್ ಪ್ರಾಡಕ್ಟ್ಸ್ ಲಿಮಿಟೆಡ್ ಎಂಬ ಪುಟ್ಟ ಕಂಪನಿಯ ಜವಾಬ್ದಾರಿಯನ್ನು ಹೊತ್ತುಕೊಂಡರು. ಅಡುಗೆ ಎಣ್ಣೆ ಹಾಗೂ ಬಟ್ಟೆ ಒಗೆಯುವ ಸೋಪುಗಳನ್ನು ಅವರ ಕಂಪನಿ ತಯಾರಿಸುತ್ತಿತ್ತು.
ಸ್ಟ್ಯಾನ್ ಫೋರ್ಡ್ ನಲ್ಲಿರುವ ಅವರ ಸ್ನೇಹಿತರು ತಂತ್ರಜ್ಞಾನದ ಸ್ಟಾರ್ಟ್ ಅಪ್ ಗಳಲ್ಲಿ ಹಾಗೂ ನೂತನ ತಂತ್ರಜ್ಞಾನದ ಲ್ಯಾಬ್ಗಳಲ್ಲಿ ಕಾರ್ಯನಿರ್ವಹಿಸುವಾಗ ಅಜೀಮ್ ಅವರು ಹೈಡ್ರೋಜಿನೇಟೆಡ್ ಕೊಬ್ಬು ಹಾಗೂ ಸೋಪುಗಳ ಫಾರ್ಮುಲಗಳನ್ನು ತಮ್ಮ ಅತ್ಯಂತ ಸಾಧಾರಣವಾದ ಫ್ಯಾಕ್ಟರಿಯಲ್ಲಿ ಅಭಿವೃದ್ಧಿಪಡಿಸುತ್ತಿದ್ದರು. ಉಳಿದವರು ಅಷ್ಟಾಗಿ ಕಲಿಯಲು ಇಚ್ಛಿಸದ ಕೆಲವು ವಿಷಯಗಳನ್ನು
ಅಜೀಮ್ ಅವರು ತಮ್ಮ ತಾಯಿಯಿಂದ ಕಲಿತಿದ್ದರು. ಅಜೀಂ ಪ್ರೇಮ್ ಜಿ ಅವರ ತಾಯಿ ಓರ್ವ ವೈದ್ಯರಾಗಿದ್ದರು… ಆದರೆ ಎಂದೂ ವೃತ್ತಿಯಲ್ಲಿ ನಿರತರಾಗಿರಲಿಲ್ಲ…. ಒಂದು ಚಾರಿಟಿ ಆಸ್ಪತ್ರೆಯನ್ನು 50 ವರ್ಷಗಳ ಕಾಲ ನಡೆಸಿದ ಅವರು ಪೋಲಿಯೋ ಮತ್ತು ಸೆರೆಬ್ರಲ್ ಪಾಲಿಸಿ ತೊಂದರೆಗಳಿಂದ ಬಳಲುತ್ತಿದ್ದ ಮಕ್ಕಳ ಆಸ್ಪತ್ರೆಯನ್ನು ನಡೆಸುತ್ತಿದ್ದರು ಆ ಹೊತ್ತಿಗೆ ಸರ್ಕಾರದ ಸಹಾಯಧನವಾಗಲಿ, ಯಾವುದೇ ರೀತಿಯ ಸಂಘ-ಸಂಸ್ಥೆಗಳ ಧನ ಸಹಾಯವಾಗಲಿ ದೊರೆಯುತ್ತಿರಲಿಲ್ಲ. ಜಗತ್ತು ಮರೆತು ಹೋಗಿದ್ದ ಮಕ್ಕಳಿಗಾಗಿ ಆಕೆ ತನ್ನದೇ ಆದ ರೀತಿಯಲ್ಲಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದರು. ಆ ಮಕ್ಕಳ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ತನ್ನ ತಾಯಿಯ ಹೋರಾಟವನ್ನು ನೋಡುತ್ತಾ ಬೆಳೆದ ಅಜೀಮ್ ಅವರಲ್ಲಿ ತಾಯಿಯ ಈ ಉದಾತ್ತ ಮನೋಭಾವವು ಅವರಲ್ಲಿ ಜೀವನದ ಕುರಿತಾದ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿತ್ತು. ಹಾಗಾದರೆ ನಿಜವಾದ ಜೀವನ ಎಂದರೆ ಏನು ? ಯಾವುದನ್ನು ನಾವು ಯಶಸ್ಸು ಎಂದು ಕರೆಯುತ್ತೇವೆ ಎಂಬ ಪ್ರಶ್ನೆಗಳು ಅವರನ್ನು ದಾಳಿ ಇಡುತ್ತಿದ್ದವು.
ತನ್ನ ವ್ಯವಹಾರವನ್ನು ರಕ್ಷಿಸಿಕೊಳ್ಳುವ ಅವಶ್ಯಕತೆಯನ್ನು ಮನಗಂಡ ಆತ ಮುಂದಿನ ಒಂದೆರಡು ವರ್ಷಗಳಲ್ಲಿ ಅದನ್ನು ಸರಿಯಾಗಿ ನಿರ್ವಹಿಸುತ್ತಲೇ ಕೇಶ ಸಂರಕ್ಷಣೆ, ಮಕ್ಕಳ ಬೇಬಿ ಕೇರ್ ಪ್ರಾಡಕ್ಟ್ ಗಳು, ಹೈಡ್ರಾಲಿಕ್ ಸಿಲಿಂಡರ್ಗಳ ವ್ಯವಹಾರವನ್ನು ಆರಂಭಿಸಿದರು.
1977ರಲ್ಲಿ ಆತ ವಿಪ್ರೋ ಎಂಬ ಹೆಸರಿನಲ್ಲಿ ತನ್ನ ವಿವಿಧ ಉತ್ಪನ್ನಗಳನ್ನು ತಯಾರಿಸುವ ಕಂಪನಿಯನ್ನು
ಆರಂಭಿಸಿದರು. ದೇಶದ ಸಾವಿರಾರು ವ್ಯವಹಾರ ಸಂಸ್ಥೆಗಳಂತೆಯೇ ವಿಪ್ರೋ ಸಂಸ್ಥೆ ಕೂಡ ಒಂದಾಗಿ ಕಾರ್ಯನಿರ್ವಹಿಸಲು ಆರಂಭಿಸಿತು.
1977ರಲ್ಲಿ ಭಾರತದ ಸರ್ಕಾರವು ಐಬಿಎಮ್ ಕಂಪನಿಯನ್ನು ಭಾರತ ದೇಶದಿಂದ ಹೊರಗಟ್ಟಿತು. ಇದು ಹಲವಾರು ಉದ್ಯಮ ಸಾಮ್ರಾಜ್ಯದ ನಾಯಕರನ್ನು ಧೃತಿಗೆಡಿಸಿತು. ಕಂಪ್ಯೂಟರ್ ಪ್ರಪಂಚದ ದೈತ್ಯ ಶಕ್ತಿಯ ಸಹಾಯವಿಲ್ಲದೆ ಭಾರತೀಯ ತಂತ್ರಜ್ಞಾನ ಮುಂದುವರೆಯುವುದು ಹೇಗೆ ಎಂಬ ಭಯ ಅವರನ್ನು ಕಾಡತೊಡಗಿತು.
ಅಜೀಮ್ ಅವರ ಯೋಚಿಸುವ ರೀತಿ ಇವರೆಲ್ಲರಿಗಿಂತ ವಿಭಿನ್ನವಾಗಿತ್ತು. ಒಂದು ಇಡಿ ಜೀವಿತದ ಬಹುದೊಡ್ಡ ಅವಕಾಶ ತಮಗೆ ಒದಗಿತು ಎಂದೇ ಅವರು ಯೋಚಿಸಿದರು. ಐಬಿಎಮ್ ನ ನಿರ್ಗಮನದಿಂದ ಉಂಟಾದ ನಿರ್ವಾತವನ್ನು ಯಾರಾದರೊಬ್ಬರು ತುಂಬಲೇಬೇಕು ಅದು ತಾವೇ ಏಕಾಗಬಾರದು ಎಂಬುದು ಅವರ ಯೋಚನೆಯಾಗಿತ್ತು.
ತಮ್ಮ ಅಡುಗೆ ಎಣ್ಣೆಯ ಉತ್ಪಾದನಾ ಕ್ಷೇತ್ರವನ್ನು ಅವರು ಸಂಪೂರ್ಣವಾಗಿ ಬದಲಾಯಿಸಿ ಆ ಜಾಗದಲ್ಲಿ ಕಂಪ್ಯೂಟರ್ಗಳು ಮತ್ತು ಸಾಫ್ಟ್ ವೇರ್ ಗಳ ಕಂಪನಿಯನ್ನು ಆರಂಭಿಸಿದರು. ಅಮೆರಿಕದ ಟೆಕ್ನಾಲಜಿ ಸಂಸ್ಥೆಗಳ ಜೊತೆಗೆ ಅವರು ಒಡಂಬಡಿಕೆಯನ್ನು ಮಾಡಿಕೊಂಡು ಭಾರತದ ಅತ್ಯುತ್ತಮ ಇಂಜಿನಿಯರ್ ಗಳನ್ನು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡರು. ಅವರೆಲ್ಲರಿಗೂ ಅತ್ಯುತ್ತಮವಾದ ತರಬೇತಿಯನ್ನು ನೀಡುವಲ್ಲಿ ತಮ್ಮ ಎಲ್ಲಾ ಹೂಡಿಕೆಯನ್ನು ತೊಡಗಿಸಿದರು. ಅಜೀಮ್ ಅವರ ಈ ವರ್ತನೆಯು ಜನರಿಗೆ ತಿಕ್ಕಲುತನದ ಪರಮಾವಧಿ ಎಂದು ತೋರಿತಾದರೂ ಕೂಡ ಅಜೀಮ್ ತಮ್ಮ ಪ್ರಯತ್ನವನ್ನು ಕೈ ಬಿಡಲಿಲ್ಲ.89, 90ರ ದಶಕದಲ್ಲಿ ಅತ್ಯಂತ ವೇಗವಾಗಿ ಸಂಸ್ಥೆಯು ಬೆಳೆಯಿತು. ಎಲ್ಲರಿಗೂ ಅನುಕೂಲವಾಗುವಂತಹ ಸಾಫ್ಟ ವೇರ್ ಗಳನ್ನು ಅವರು ಅಭಿವೃದ್ಧಿಪಡಿಸಿ ಅಮೆರಿಕಾದ ಕಾರ್ಪೊರೇಷನ್ ಗಳಿಗೆ ನೀಡಿದರು. ಭಾರತ ದೇಶದಿಂದ ಮೊಟ್ಟ ಮೊದಲ ಬಾರಿಗೆ ವಿದೇಶಕ್ಕೆ ಕಂಪ್ಯೂಟರ್ ತಂತ್ರಜ್ಞಾನಗಳನ್ನು ರಫ್ತು ಮಾಡಿದ ಕೀರ್ತಿ ಅವರದಾಯಿತು. ಕಂಪ್ಯೂಟರ್ ಸಾಫ್ಟ ವೇರ್ ನ ದೈತ್ಯರಾದ ಐಬಿಎಮ್ ಮತ್ತು ಜಿ ಐ ಕಂಪನಿಗಳು ಅವರ ಕಕ್ಷಿದಾರರಾದರು… 1999 ರಲ್ಲಿ ಅಜೀಮ್ ಪ್ರೇಮ್ ಜಿ ಇಡೀ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡರು. ಫೋರ್ಬ್್ಸ ಪಟ್ಟಿಯಲ್ಲಿ ಭಾರತ ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಎಂದು ಅವರನ್ನು ಗುರುತಿಸಲಾಯಿತು.ಬಿಸಿನೆಸ್ ವೀಕ್ ಅವರನ್ನು ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಉದ್ಯಮಿ ಎಂದು ಗುರುತಿಸಿತು. ಜಾಗತಿಕ ಸ್ಟಾಕ್ ಮಾರುಕಟ್ಟೆಯು ಮೇಲಕ್ಕೆ ಏರಿದಂತೆ ಆತನ ಗಳಿಕೆ ಕೂಡ ಹೆಚ್ಚತೊಡಗಿತು.
ಹಣದಿಂದ ಖರೀದಿಸಬಹುದಾದ ಪ್ರತಿಯೊಂದು ಅವರ ಬಳಿ ಇತ್ತು . ಆದರೆ ಅವರು ಪ್ರತಿದಿನ ಮುಂಜಾನೆ ಭಾರತ ದೇಶದ ಚಿಕ್ಕ ಪುಟ್ಟ ಗಲ್ಲಿಗಳಲ್ಲಿ, ರಸ್ತೆಗಳಲ್ಲಿ ಕೆಲ ಸಂಗತಿಗಳನ್ನು ನೋಡಿ ಮುದುಡಿದ ಮನದಿಂದ ಮನೆಗೆ ಹಿಂತಿರುಗುತ್ತಿದ್ದರು.
ಮುರಿದು ಹೋದ ತಾರಸಿಯನ್ನು ಹೊಂದಿದ ಸರ್ಕಾರಿ ಶಾಲೆಗಳಲ್ಲಿ ಲಕ್ಷಾಂತರ ಸಂಖ್ಯೆಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದನ್ನು ಅವರು ನೋಡುತ್ತಿದ್ದರು. ಸರಿಯಾದ ತರಬೇತಿ ಇಲ್ಲದ ಶಿಕ್ಷಕರು ಗ್ರಾಮೀಣ ಭಾಗದ ಮಕ್ಕಳಿಗೆ ಪಾಠ ಮಾಡುವುದನ್ನು ನೋಡಿ ಅವರಿಗೆ ಬೇಸರವಾಗುತ್ತಿತ್ತು. 10 ವರ್ಷದ ಮಕ್ಕಳಾದರೂ ಕೂಡ ಸರಿಯಾಗಿ ಓದಲು ಬರೆಯಲು ಬಾರದ ಮಕ್ಕಳ ಪರಿಸ್ಥಿತಿ ಅವರಲ್ಲಿ ಕನಿಕರವನ್ನು ಉಂಟು ಮಾಡಿತು… ತಂತ್ರಜ್ಞಾನದಲ್ಲಿ ಭಾರತೀಯರು ಆಗಸವನ್ನು ಮುಟ್ಟಿದರೂ ಕೂಡ ಮೂಲಭೂತ ಅಗತ್ಯವಾಗಬೇಕಿದ್ದ ಪ್ರಾಥಮಿಕ ಶಿಕ್ಷಣದ ಕೊರತೆಯಿಂದ ಒಂದು ಇಡೀ ತಲೆಮಾರು ಶೈಕ್ಷಣಿಕವಾಗಿ ತೆವಳುತ್ತಿರುವುದನ್ನು ಕಂಡು ಅವರಿಗೆ ಬೇಸರವಾಗುತ್ತಿತ್ತು…. ಆಗ ಅವರು ತಮ್ಮ ತಾಯಿ ತಮ್ಮ ಬದುಕಿನ ಸರಿಸುಮಾರು ಐವತ್ತು ವರ್ಷಗಳನ್ನು ಜಗತ್ತು ಮರೆತ ಮಕ್ಕಳಿಗಾಗಿ ಸವೆಸಿದ್ದನ್ನು ನೆನಪಿಸಿಕೊಂಡರು.
2001ರಲ್ಲಿ ಅವರು ತೆಗೆದುಕೊಂಡ ನಿರ್ಧಾರ ಇಡೀ ಉದ್ಯಮ ಜಗತ್ತನ್ನು ನಿಬ್ಬೆರಗಾಗಿಸಿತು. ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಸ್ಥೆಯನ್ನು ಆರಂಭಿಸಿದ ಅವರು ಶ್ರೀಮಂತರ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದರ ಬದಲಾಗಿ ಭಾರತ ದೇಶದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ತಳಮಟ್ಟದಿಂದ ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದರು.
ಅವರ ತಂಡಗಳು ದೇಶದ ಮೂಲೆ ಮೂಲೆಗಳಲ್ಲಿ ಇರುವ ಊಹಿಸಲು ಕೂಡ ಸಾಧ್ಯವಾಗದ ಅತ್ಯಂತ ಬಡ ಜಿಲ್ಲೆಗಳನ್ನು ತಲುಪಿದರು. ಅಲ್ಲಿಯ ಶಾಲೆಗಳಲ್ಲಿ ಪಠ್ಯಪುಸ್ತಕಗಳಿರಲಿಲ್ಲ… ಯಾವುದೇ ರೀತಿಯ ಶೈಕ್ಷಣಿಕ ವಸ್ತುಗಳ ಸರಬರಾಜು ಇರಲಿಲ್ಲ ಹಾಗೂ ಶಿಕ್ಷಕರಿಗೆ ಕೂಡ ಯಾವುದೇ ರೀತಿಯ ಮೂಲಭೂತ ತರಬೇತಿಗಳು ಇರಲಿಲ್ಲ… ಮತ್ತೆ ಕೆಲವೇ ಸೂರೇ ಇಲ್ಲದ ಶಾಲೆಗಳನ್ನು ಅವರು ಗುರುತಿಸಿದರು. ಅವರು ವ್ಯವಸ್ಥೆಯನ್ನು ಬದಲಿಸಲಿಲ್ಲ ಬದಲಾಗಿ ಆ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಿದರು. ಒಂದು ಸಮಯಕ್ಕೆ ಕೇವಲ ಒಬ್ಬ ಶಿಕ್ಷಕರು ಎಂಬಂತೆ ಅಜೀಮ್ ಪ್ರೇಮ್ ಜಿ ಫೌಂಡೇಶನ್ 263 ಶಿಕ್ಷಕರ ತರಬೇತಿ ಸಂಸ್ಥೆಗಳನ್ನು ಇಡೀ ರಾಷ್ಟ್ರದಾದ್ಯಂತ ಆರಂಭಿಸಿದರು. ಸರ್ಕಾರಿ ಶಾಲೆಯ ಶಿಕ್ಷಕರಿಗೆ ತರಬೇತಿ ನೀಡಿದರು.ಶಾಲೆಗಳಿಗೆ ಬೇಕಾದ ಮೂಲಭೂತ ಅವಶ್ಯಕತೆ ವಸ್ತುಗಳ ಸಾಮಗ್ರಿಗಳನ್ನು ನೀಡಿದರು. ಮುರಿದು ಹೋದ ವ್ಯವಸ್ಥೆಯ ಒಳಗೆ ನಿಂತು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕೆಲಸಗಳನ್ನು ಅವರು ನಿರ್ವಹಿಸಿ ಅತ್ಯುತ್ತಮ ಉಪಯೋಗಕ್ಕೆ ದಾರಿ ಮಾಡಿಕೊಟ್ಟರು. ಇಲ್ಲಿಗೆ ಅವರ ಕೆಲಸ ಮುಗಿಯಲಿಲ್ಲ.
2010ರಲ್ಲಿ ಅವರು ಭಾರತದ ವ್ಯವಹಾರಿಕ ಕ್ಷೇತ್ರದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯಬಹುದಾದ ದಿನ. ಜಗತ್ತಿನ ಅತ್ಯಂತ ಶ್ರೀಮಂತರಾದ ವಾರನ್ ಬಫೆಟ್ ಹಾಗೂ ಬಿಲ್ ಗೇಟ್ಸ್ ಅವರ ರೀತಿಯಲ್ಲಿಯೇ ಅಜೀಮ್ ಅವರು ತಾವು ಗಳಿಸಿದ ಸಂಪತ್ತಿನ ಬಹುತೇಕ ಭಾಗವನ್ನು ತಮ್ಮ ಜೀವಿತಾವಧಿಯಲ್ಲಿ ದಾನವಾಗಿ ವಿನಿಯೋಗಿಸುವ ತೀರ್ಮಾನವನ್ನು ಕೈಗೊಂಡರು. ಪ್ರಮಾಣ ಮಾಡಿ ಮರೆಯುವವರು ಬಹಳ ಜನ…ಆದರೆ ಅಜೀಮ್ ಅಂತವರಲ್ಲ ಅವರು ಈ ರೀತಿಯ ಸಂಪತ್ತಿನ ವಿನಿಯೋಗದ ಕುರಿತ ರೂಪರೇಷೆಗಳನ್ನು ಹಾಕಲಾರಂಬಿಸಿದರು ಹಾಗೂ ಹೊಸ ನಿಯಮಗಳನ್ನು ಮರಳಿ ತರಲು ಕಾರಣೀಭೂತರಾದರು.
ಮೊದಲ ಹಂತವಾಗಿ ವಿಪ್ರೋ ಕಂಪನಿಯ 8.7 ಪ್ರತಿಶತ ಅಂದರೆ ಸುಮಾರು ಎರಡು ಬಿಲಿಯನ್ ಹಣವನ್ನು ದಾನವಾಗಿ ನೀಡಿದರು ನಂತರ 12%, 18% ಹಾಗೂ ಇದೀಗ ವಿಪ್ರೋ ಕಂಪನಿಯ ಆದಾಯದ ಶೇಕಡಾ 34 ರಷ್ಟು ಭಾಗವನ್ನು ದಾನವಾಗಿ ವಿನಿಯೋಗಿಸಿದರು.
ಇದೀಗ ಕಂಪನಿಯ ಶೇಕಡಾ 67 ರಷ್ಟು ಸಂಪತ್ತನ್ನು ಉಳಿಸಿ ಅದನುಳ ತಮ್ಮ ಫೌಂಡೇಶನ್ ಗೆ ನೀಡಿದ ಅವರು ಕೊಡುಗೈ ದಾನಿಯಾಗಿದ್ದಾರೆ. ಹೀಗೆ ಅವರು ದಾನವಾಗಿ ನೀಡಿದ ಒಟ್ಟು ಮೊತ್ತ 21 ಬಿಲಿಯನ್ ಡಾಲರ್ ಗಳು…. ಭಾರತೀಯ ಇತಿಹಾಸದಲ್ಲಿಯೇ ಅತಿ ದೊಡ್ಡ ಮಟ್ಟದ ದಾನ ಇದೆಂದು ದಾಖಲಾಗಿದೆ.
ಪ್ರಸ್ತುತ ಅವರ ಬಳಿ 12 ಬಿಲಿಯನ್ ಡಾಲರ್ ನಷ್ಟು ಸಂಪತ್ತು ಇದ್ದು ಅದರ ಎರಡರಷ್ಟು ಸಂಪತ್ತನ್ನು ಅವರು ದಾನಕ್ಕೆ ವಿನಿಯೋಗಿಸಿದ್ದಾರೆ. ಇದರ ಅದ್ಭುತ ಪರಿಣಾಮವನ್ನು ಇದೀಗ ನಾವು ಕಾಣಬಹುದು.
ಇದೀಗ ಭಾರತ ದೇಶದ ಸರಿ ಸುಮಾರು ಎಂಟು ರಾಜ್ಯಗಳಲ್ಲಿ ಫೌಂಡೇಶನ್ ಕಾರ್ಯನಿರ್ವಹಿಸುತ್ತಿದ್ದು ಒಟ್ಟು ಮೂರುವರೆ ಲಕ್ಷ ಸರ್ಕಾರಿ ಶಾಲೆಗಳನ್ನು ತಲುಪಿದೆ. ಸಾವಿರಾರು ಶಿಕ್ಷಕರನ್ನು ಈ ತರಬೇತಿ ಹೊಸ ರೀತಿಯ ಶಿಕ್ಷಣ ವ್ಯವಸ್ಥೆಗೆ ಅಣಿ ಮಾಡಿದ್ದು ಸರಿ ಸುಮಾರು ಎಂಟು ಮಿಲಿಯನ್ ಮಕ್ಕಳು ಅವರ ಕಾರ್ಯಕ್ರಮಗಳಿಂದ ಉತ್ತಮ ಶೈಕ್ಷಣಿಕ ಲಾಭವನ್ನು ಗಳಿಸಿದ್ದಾರೆ….. ಎಂಟು ಕೋಟಿಗೂ ಹೆಚ್ಚು ಜನ ಮಕ್ಕಳು ಅವರ ಕಾರ್ಯಯೋಜನೆಗಳಿಂದ ಲಾಭ ಪಡೆದಿದ್ದಾರೆ.
ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯವನ್ನು ನಿರ್ಮಿಸಿರುವ ಅವರು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ತಯಾರಿಸಿಲ್ಲ ಬದಲಾಗಿ ಮುಂದಿನ ಜನಾಂಗವನ್ನು ಮುನ್ನಡೆಸುವ ಸಮಾಜ ಸೇವಕರನ್ನು ಸೃಷ್ಟಿಸಿದ್ದಾರೆ. ಶಿಕ್ಷಕರು ಹಾಗೂ ಅಭಿವೃದ್ಧಿಶೀಲ ಕಾಮಗಾರಿಗಳನ್ನು ನಡೆಸುವವರು ತಮ್ಮ ಉದ್ಯೋಗಗಳಲ್ಲಿ ಮುಂದುವರೆದಿದ್ದಾರೆ. ಕೋವಿಡ್ ಸಮಯದಲ್ಲಿಯೂ ಕೂಡ ತಮ್ಮ ಕಾರ್ಯಕ್ಷೇತ್ರದಿಂದ ಹಿಂದಿರುಗದ ಅವರ ಕಾರ್ಯವೈಖರಿಯಿಂದ ಸಂತಸ ಪಟ್ಟ ಅಜೀಮ್ ಪ್ರೇಮ್ ಜಿ ಅವರು ಮತ್ತೆ ಸರಿ ಸುಮಾರು 140 ಮಿಲಿಯನ್ ಡಾಲರ್ ನಷ್ಟು ಹಣವನ್ನು ಪರಿಹಾರ ಕಾಮಗಾರಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅಜೀಂ ಪ್ರೇಮ್ ಜಿ ಅವರ ಬೆಂಬಲಿಗರು ಇಡೀ ಭಾರತದಾದ್ಯಂತ ಅವರ ಪರವಾಗಿ ಕಾರ್ಯನಿರ್ವಹಿಸಿದ್ದಾರೆ. 1150ಕ್ಕೂ ಹೆಚ್ಚು ಸರಕಾರಿ ತರ ಸಂಸ್ಥೆಗಳ ಜನರಿಗೆ ಸಹಾಯ ಹಸ್ತವನ್ನು ಚಾಚಿದ್ದಾರೆ. ಇಷ್ಟೆಲ್ಲವನ್ನು ಮಾಡಿದ ಅವರು
ಬ್ಯಾಂಕಿನ ಖಾತೆಯಲ್ಲಿ ಕೋಟ್ಯಂತರ ರೂ ಹಣವನ್ನು ಹೊಂದಿದ್ದರೂ ಕೂಡ ಅತ್ಯಂತ ಸರಳವಾಗಿ ಇದು ತಮ್ಮ ಕಾರನ್ನು ತಾವೇ ಡ್ರೈವ್ ಮಾಡಿಕೊಂಡು ಓಡಾಡುತ್ತಾರೆ ಫ್ಲೆಟ್ಗಳಲ್ಲೂ ಕೂಡ ಬಿಸಿನೆಸ್ ಕ್ಲಾಸ್ ನಲ್ಲಿ ಅವರು ಓಡಾಡುವುದಿಲ್ಲ. ಒಂದು ಉದ್ದೇಶವನ್ನು ಸಶಕ್ತವಾಗಿರಿಸಬೇಕೆಂದರೆ ಸಮುದಾಯದ ಸಹಕಾರ ಬೇಕೇ ಬೇಕು. ಯಾವುದೇ ಕೆಲಸವನ್ನು ಒಬ್ಬರೇ ಮಾಡಲು ಸಾಧ್ಯ ವಾಗುವುದಿಲ್ಲ ಹಾಗೂ ಆಗಬಾರದು ಕೂಡ. ಅಡುಗೆಗೆ ಬಳಸುವ ಎಣ್ಣೆಯನ್ನು ತಯಾರಿಸುವ ಕಂಪನಿಯಿಂದ ಹಿಡಿದು ಮಕ್ಕಳ ಬದುಕಿನವರೆಗೆ ತಲುಪುವ ಅಜೀಮ್ ಪ್ರೇಮ್ ಜಿ ಅಂತವರು ಭಾರತದ ಇತಿಹಾಸದಲ್ಲಿ ಅಜರಾಮರರಾಗಿ ಉಳಿಯುತ್ತಾರೆ
ಅವರು ತಮಗೆ ದೊರೆಯುವ ಚಿಕ್ಕಪುಟ್ಟ ಅವಕಾಶಗಳ ಮೂಲಕ ದೊಡ್ಡದಾದ ವಾಸ್ತವದ ಏಣಿಯನ್ನು ಏರುತ್ತಾರೆ. ಜನ ಮಾನಸದಿಂದ ಕಣ್ಮರೆಯಾದ ಶಾಲೆಗಳ ತರಗತಿಯ ಕೋಣೆಯ ಬಾಗಿಲ ಹಿಂದೆ ಅಡಗಿಕೊಂಡ ಸಾವಿರಾರು ಮಕ್ಕಳನ್ನು ಸುಸಜ್ಜಿತ ಶಾಲೆಗಳಿಗೆ ಕರೆತಂದಿದ್ದಾರೆ. ಸತತ 25 ವರ್ಷಗಳ ಕಾಲ ಮಕ್ಕಳ ಭವಿಷ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ ಅವರು ಇಂದು ಲಕ್ಷಾಂತರ ವಿದ್ಯಾರ್ಥಿಗಳ ಪಾಲಿಗೆ ದಾರಿ ದೀಪವಾಗಿದ್ದಾರೆ
ತನ್ನ 21ರ ಹರೆಯದಲ್ಲಿ ಸ್ಟಾ÷್ಯನ್ ಫೋರ್ಡ್ ನಿಂದ ತನ್ನ ಕೌಟುಂಬಿಕ “ಇದು ಕೇವಲ ಯಶಸ್ಸಲ್ಲ. ಯಶಸ್ಸಿನ ನಿಜವಾದ ಅರ್ಥವನ್ನು ತಿಳಿದುಕೊಂಡಿರುವ ಹಾಗೂ ಅದನ್ನು ಪರಿಪಾಲಿಸುತ್ತಿರುವ ಜೀವನ ಶೈಲಿ” ಎಂಬುದನ್ನು ಅರಿತು ಬಾಳುವ ಅಜೀಮ್ ಪ್ರೇಮ್ ಜಿ ಅವರಿಗೆ ಧನ್ಯವಾದಗಳು ಅರ್ಪಿಸೋಣ.
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ಯಶಸ್ಸಿನ ನಿಜವಾದ ಅರ್ಥ?… ಹಾಗೂ ಅಜೀಮ್ ಪ್ರೇಮ್ ಜಿ



