ಹೊಸಕೋಟೆ: ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಕ್ಷಯರೋಗಕ್ಕೆ ಉಚಿತ ಚಿಕಿತ್ಸೆ ಪಡೆಯಲು ಸೌಲಭ್ಯ ಕಲ್ಪಿಸಲಾಗಿದೆ ಎಂದು ಡಾ: ಫಾರೂಕ್ ಹೇಳಿದರು.ಅವರು ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷಯರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು ಕ್ಷಯರೋಗವನ್ನು ಸೂಕ್ತ ರೀತಿಯಲ್ಲಿ ಪತ್ತೆಹಚ್ಚಿದರೆ ಸಂಪೂರ್ಣ ಚಿಕಿತ್ಸೆ ಯೊಂದಿಗೆ ಗುಣಪಡಿಸಬಹುದು. ಈ ಬಗ್ಗೆ ಜನರು ರೋಗ ಲಕ್ಷಣಗಳು ಕಂಡುಬಂದಲ್ಲಿ ಪ್ರಾರಂಭಿಕ ಹಂತದಲ್ಲಿಯೇ ನಿರ್ಲಕ್ಷ್ಯ ವಹಿಸದೆ ಸೂಕ್ತ ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಮಾಹಿತಿಯನ್ನು ನೀಡಿದ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಕುಮಾರ್ ಮಾತನಾಡಿ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನವು ನ.15ರಿಂದ ಡಿ.2ರವರೆಗೆ ತಾಲೂಕಿನಾದ್ಯಂತ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ನಡೆಯಲಿದೆ. ಸ್ಥಳೀಯ ಆರೋಗ್ಯ ಕಾರ್ಯಕರ್ತರು ಹೆಚ್ಚು ಅಪಾಯಕಾರಿ ಪ್ರದೇಶಗಳನೊಳಗೊಂಡಂತೆ ಎಲ್ಲಾ ಗ್ರಾಮಗಳಲ್ಲಿಯೂ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದಡಿಯಲ್ಲಿ ಎರಡು ವಾರಕ್ಕಿಂತ ಹೆಚ್ಚು ಅವಧಿಯ ಕೆಮ್ಮು, ಸಂಜೆ ವೇಳೆ ಅಥವಾ ರಾತ್ರಿ ವೇಳೆ ಜ್ವರ ಬರುವುದು, ಬೆವರುವುದು, ಕಫ ಬರುವುದು, ಕಫದಲ್ಲಿ ರಕ್ತ ಕಾಣಿಸುವುದು, ಎದೆ ನೋವು, ಹಸಿವಾಗದಿರುವುದು, ತೂಕ ಇಳಿಕೆ ಮತ್ತು ಕುತ್ತಿಗೆ ಹಾಗೂ ಕಂಕುಳಿನ ಬಗಲುಗಳಲ್ಲಿ ಗಂಟುಗಳು ಈ ಎಲ್ಲಾ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಭೇಟಿ ನೀಡಿ ವೈದ್ಯರ ಸಲಹೆ ಸೂಚನೆಯಂತೆ ಕಫ ಪರಿಕ್ಷಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ತಾಲೂಕು ಕ್ಷಯರೋಗ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಸುದೀಪ್ ರವರು ಮಾತನಾಡಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು ಅಲ್ಲದೆ ನಿಕ್ಷಯ್ ಪೋಷಣ ಯೋಜನೆ ಅಡಿಯಲ್ಲಿ ಪ್ರೋತ್ಸಾಹಧನ ಹಾಗೂ ಪ್ರತಿ ತಿಂಗಳು ಆರು ತಿಂಗಳುಗಳವರೆಗೆ ಕ್ಷಯರೋಗಿಗೆ ನೀಡಲಾಗುವ ಪೌಷ್ಟಿಕ ಆಹಾರ ಕಿಟ್ ಅನ್ನು ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು.
ಟಿಬಿಎಚ್ವಿಯ ಚಂದ್ರಶೇಖರ್ ಹಾಗೂ ಆರ್ಬಿಎಸ್ಕೆಯ ಮಂಜುನಾಥ್ರವರು ಸದರಿ ಕಾರ್ಯಕ್ರಮದ ಕರಪತ್ರಗಳನ್ನು ಸಾರ್ವ
ಜನಿಕರಿಗೆ ಹಂಚಿ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು.
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿ ಕಾರಿಗಳಾದ ಡಾ: ಸಿ.ಎಸ್.ಸತೀಶ್ಕುಮಾರ್, ಮಕ್ಕಳ ತಜ್ಞೆ ಡಾ: ಸೌಮ್ಯ, ಹಿರಿಯ ಕ್ಷ-ಕಿರಣ ತಂತ್ರಜ್ಞಾಧಿಕಾರಿ ನರೇಶ್, ಮೇರಿ, ರೇಣುಕಪ್ಪ, ಫಾರ್ಮಸಿ ಅಧಿಕಾರಿಗಳು ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.