ಬೆಂಗಳೂರು: ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಆರ್.ಆರ್.ನಗರದಲ್ಲಿ 20 ದಿನಗಳ ನವಜಾತ ಶಿಶು ಮಾರಾಟ ಮಾಡುತ್ತಿದ್ದ ಪ್ರಕರಣ ಸಂಬಂಧ ಮತ್ತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದ ಏಜೆಂಟ್ ಆಗಿದ್ದ ಮಹಿಳಾ ಆರೋಪಿ ರಮ್ಯಾಳನ್ನು ಹೆಬ್ಬಾಳದಲ್ಲಿ ಬಂಧಿಸಲಾಗಿದೆ. ಹಾಗೂ ರಾಜಾಜಿನಗರದಲ್ಲಿ ನಕಲಿ ವೈದ್ಯ ಕೆವಿನ್ನನ್ನು ಅರೆಸ್ಟ್ ಮಾಡಲಾಗಿದೆ. ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು ಅನೇಕ ವಿಚಾರಗಳು ಬಯಲಾಗುತ್ತಿವೆ.
ಹಸುಗೂಸು ಮಾರಾಟ ಗ್ಯಾಂಗ್ಗೆ ಮಗುವನ್ನು ಮಾರಿದ್ದ ರಮ್ಯಾಳನ್ನು ಹೆಬ್ಬಾಳದಲ್ಲಿ ಬಂಧಿಸಲಾಗಿದೆ. ರಮ್ಯಾಳ ಸಂಬಂಧಿ ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದಳು. ಅಬಾರ್ಷನ್ಗೆ ಓಡಾಡುತ್ತಿದ್ದ ಯುವತಿಯನ್ನು ರಮ್ಯಾ ಆರೈಕೆ ಮಾಡಿದ್ದಳು. ಆಕೆಯನ್ನು 9 ತಿಂಗಳು ಜೋಪಾನ ಮಾಡಿ ಮಗುವನ್ನು ಪಡೆದುಕೊಂಡಿದ್ದಳು.
ಬಳಿಕ ಇದೇ ಗ್ಯಾಂಗ್ ಜೊತೆ ಸೇರಿ ಮಗುವನ್ನು ಮಾರಾಟ ಮಾಡಿದ್ದಳು. ಮಗು ಹೆತ್ತುಕೊಟ್ಟಿದ್ದಕ್ಕೆ ಸಂಬಂಧಿ ಯುವತಿಗೆ ರಮ್ಯಾ ಹಣ ನೀಡಿದ್ದಳು. ನಂತರ ಹೊಸ ವರನನ್ನು ನೋಡಿ ಯುವತಿಗೆ ಮದುವೆ ಕೂಡ ಮಾಡಿಸಿದ್ದಳು. ಸದ್ಯ ಮಗು ಮಾರಾಟ ಕೇಸ್ನಲ್ಲಿ ಇತರೆ ಆರೋಪಿಗಳು ರಮ್ಯಾಳ ಹೆಸರು ಬಾಯ್ಬಿಟ್ಟಿದ್ದರು. ಪ್ರಕರಣದಲ್ಲಿ ಒಟ್ಟಾರೆಯಾಗಿ 11 ಆರೋಪಿಗಳನ್ನು ಬಂಧಿಸಲಾಗಿದೆ. ಮೊದಲು ಅರೆಸ್ಟ್ ಆದ ನಾಲ್ವರು ಆರೋಪಿಗಳನ್ನ ಜೈಲಿಂದ ಕಸ್ಟಡಿಗೆ ಪಡೆದುಕೊಳ್ಳಲು ಸಿಸಿಬಿ ತಯಾರಿ ನಡೆಸಿದೆ.