ನವದೆಹಲಿ: ಭಾರತದ ರುದ್ರಾಂಶ್ ಖಂಡೇಲ್ವಾಲ್ ಮತ್ತು ನಿಹಾಲ್ ಸಿಂಗ್ ಅವರು ಇಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್ ವಿಶ್ವಕಪ್ನ ಮಿಕ್ಸೆಡ್ 50 ಮೀಟರ್ ಪಿಸ್ತೂಲ್ (ಎಸ್ಎಚ್1 ಕೆಟಗರಿ) ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. ಕೂಟದ ಮೂರನೇ ದಿನವಾದ ಸೋಮವಾರ ಆತಿಥೇಯ ಭಾರತಕ್ಕೆ ಚಿನ್ನದ ಪದಕ ಒಲಿಯಲಿಲ್ಲ. ಆದರೆ, ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಮತ್ತು ಕಂಚು ಹಾಗೂ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ದೊರಕಿದೆ.
ವೈಯಕ್ತಿಕ ವಿಭಾಗದ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ಗೆ ಈಗಾಗಲೇ ಅರ್ಹತೆ ಪಡೆದಿರುವ ರುದ್ರಾಂಶ್ 223.2 ಅಂಕದೊಂದಿಗೆ ಎರಡನೇ ಸ್ಥಾನ ಪಡೆದರು. ನಿಹಾಲ್ (202.8) ಮೂರನೇ ಸ್ಥಾನ ಗಳಿಸಿದರು. ಇಟಲಿಯ ಡೇವಿಡ್ ಫ್ರಾನ್ಸೆಸ್ಶೆಟ್ಟಿ 230.0 ಚಿನ್ನ ಗೆದ್ದರು.
ತಂಡ ವಿಭಾಗದ ಮಿಕ್ಸೆಡ್ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ರುದ್ರಾಂಶ್ (530), ನಿಹಾಲ್ (527) ಮತ್ತು ಟೋಕಿಯೊ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಸಿಂಗ್ರಾಜ್ (516) ಅವರನ್ನು ಒಳಗೊಂಡ ಭಾರತದ ಶೂಟರ್ಗಳು ಬೆಳ್ಳಿ ಪದಕ ಗೆದ್ದುಕೊಂಡರು. ಭಾರತದ ತಂಡ 1573 ಪಾಯಿಂಟ್ಸ್ ಗಳಿಸಿದರೆ, 1611 ಪಡೆದ ಚೀನಾ ತಂಡ ಚಿನ್ನವನ್ನು ಗೆದ್ದುಕೊಂಡಿತು.ರೈಫಲ್ ಶೂಟರ್ ಮೋನಾ ಅಗರವಾಲ್ (ಮಹಿಳೆಯರ 10 ಮೀಟರ್ ಏರ್ ರೈಫಲ್) ಈ ಕೂಟದಲ್ಲಿ ಭಾರತಕ್ಕೆ ಏಕೈಕ ಚಿನ್ನ ತಂದುಕೊಂಡಿದ್ದಾರೆ.