ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಪೆಡ್ಲರ್ಗಳನ್ನು ಬಂಧಿಸಿ 12 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ತಿಳಿಸಿದ್ದಾರೆ.
ಮೈಸೂರು ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಬಿ.ರಮೇಶ್, ಮೈಸೂರಿನ ನಜರ್ಬಾದ್ನ ಸರ್ಕಾರಿ ಅತಿಥಿ ಗೃಹದ ಕಾಂಪೌಂಡ್ ಬಳಿ ನಿಂತಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಿದರು.
ಈ ಇಬ್ಬರು ಆರೋಪಿಗಳು ಕೇರಳ ಮೂಲದವರಾಗಿದ್ದು, ಇವರಲ್ಲಿ ಒಬ್ಬ ಕಾನೂನು ವಿದ್ಯಾರ್ಥಿಯಾಗಿದ್ದಾನೆ. ಮುಂಬೈನಲ್ಲಿ ಲೈಟ್ ಮನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಮೈಸೂರಲ್ಲಿ ವಾಸವಾಗಿದ್ದಾನೆ. ಅವನ ಸಂಪರ್ಕದಿಂದ ಮೈಸೂರಿನಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯೋಜನೆ ರೂಪಿಸಿದ್ದರು.
ಬೆಂಗಳೂರಿನಿಂದ ಎಂಡಿಎಂಎ ಮಾದಕ ವಸ್ತು ತಂದು ಮಾರಾಟ ಮಾಡಲು ಯತ್ನಿಸಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಮೈಸೂರು ದಸರಾಗೆ ದೇಶ-ವಿದೇಶದಿಂದ ಹೆಚ್ಚು ಜನರು ಬರುತ್ತಾರೆ. ಈ ವೇಳೆ ಸುಲಭವಾಗಿ ಡ್ರಗ್ಸ್ ಮಾರಾಟ ಮಾಡಿ ಹಣಗಳಿಸಬಹುದು ಎಂಬ ಲೆಕ್ಕಾಚಾರ ಇಟ್ಟು ಕೊಂಡು ಕೇರಳದಿಂದ ಮೈಸೂರಿಗೆ ಬಂದಿದ್ದರು ಎಂದರು.
ಇಬ್ಬರು ಆರೋಪಿಗಳಿಂದ 12 ಲಕ್ಷ ರೂಪಾಯಿ ಮೌಲ್ಯದ 217 ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ಮಾಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.