ರಾಮನಗರ: ಬಿಡದಿ ಹೊರವಲಯದ ಕಪನಯ್ಯನದೊಡ್ಡಿ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಕಾರು ಮತ್ತು ಲಾರಿ ನಡುವಿನ ಅಪಘಾತದಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಾದ ವಿಶ್ವ (21) ಮತ್ತು ಸೂರ್ಯ (21) ಮೃತರು. ಚಾಲಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿಗಳು ಸಹಪಾಠಿಗಳಾಗಿದ್ದು, ಕಾರ್ಯನಿಮಿತ್ತ ಮೈಸೂರಿಗೆ ಹೋಗಿ ಬೆಂಗಳೂರಿಗೆ ವಾಪಸ್ಸಾಗುವಾಗ ರಾತ್ರಿ 12.30ರ ಸುಮಾರಿಗೆ ಘಟನೆ ನಡೆದಿದೆ.
ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದ್ದು, ಲಾರಿ ಮುಂಭಾಗ ಜಖಂಗೊಂಡಿದೆ. ಶವಗಳನ್ನು ರಾಮನಗರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿರುವ ರಾಮನಗರ ಸಂಚಾರ ಠಾಣೆ ಪೊಲೀಸರು ಮೃತ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ.