ಹೊಸದಿಲ್ಲಿ: ಗಲ್ಫ್ ರಾಷ್ಟ್ರದಲ್ಲಿ ಸುರಿದ ಅಭೂತಪೂರ್ವ ಮಳೆಯಿಂದಾಗಿ ಹಲವು ಕಡೆ ರಸ್ತೆ ತಡೆ ಉಂಟಾದ ಕಾರಣ ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ ಪಾಲ್ಗೊಳ್ಳಲು ಕಿರ್ಗಿಸ್ಥಾನದ ಬಿಷ್ಕೆಕ್ಗೆ ತೆರಳಿದ್ದ ಭಾರತದ ಕುಸ್ತಿಪಟುಗಳಾದ ದೀಪಕ್ ಪೂನಿಯ ಮತ್ತು ಸುಜೀತ್ ಕಲಕಲ್ ಅವರು ದುಬೈ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ.
ಅವರಿಬ್ಬರು ಶುಕ್ರವಾರ ಬಿಷ್ಕೆಕ್ನಲ್ಲಿ ನಡೆಯಲಿರುವ ಅರ್ಹತಾ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಬೇಕಾಗಿದೆ. ಒಂದು ವೇಳೆ ಅವರಿಬ್ಬರು ನಿಗದಿತ ಸಮಯದೊಳಗೆ ಅಲ್ಲಿಗೆ ತಲುಪಲು ಸಾಧ್ಯವಾಗದಿದ್ದರೆ ಅವರು ಪ್ಯಾರಿಸ್ ಒಲಿಂಪಿಕ್ಸ್ಗೆ ತೇರ್ಗಡೆಯಾಗುವ ಸಾಧ್ಯತೆಯಿಲ್ಲ.
ರಷ್ಯಾದ ಕೋಚ್ ಕಮಲ್ ಮಾಲಿಕೋವ್ ಮತ್ತು ಫಿಸಿಯೋ ಶುಭಂ ಗುಪ್ತಾ ಅವರೊಂದಿಗೆ ತೆರಳಿದ್ದ ಕುಸ್ತಿಪಟುಗಳು ಮಳೆಯಿಂದ ಉಂಟಾದ ಬಿಕ್ಕಟ್ಟಿನಿಂದಾಗಿ ವಿಮಾನ ನಿಲ್ದಾಣದಲ್ಲಿಯೇ ಮಲಗಬೇಕಾಯಿತು ಮಾತ್ರವಲ್ಲದೇ ಸರಿಯಾದ ಆಹಾರ ಕೂಡ ಅವರಿಗೆ ಸಿಗದೇ ತೊಂದರೆಗೆ ಒಳಗಾದರು.