ಗುಂಡ್ಲುಪೇಟೆ: ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬವನ್ನು ತಾಲೂಕಿನ ವಿವಿಧ ಗ್ರಾಮಗಳ ಜನತೆ ಸಂಭ್ರಮ-ಸಡಗರ, ಪೂಜೆ-ಪುನಸ್ಕಾರದೊಂದಿಗೆ ಬರಮಾಡಿಕೊಂಡಿದ್ದು, ಎಲ್ಲೆಡೆ ಹೊಸತೊಡಕು ಸಂಭ್ರಮ ಮನೆಮಾಡಿದೆ.
ತಾಲೂಕಿನ ದೊಡ್ಡತುಪ್ಪೂರು ಗ್ರಾಮದಲ್ಲಿ ಜನರು ಮನೆಗಳಲ್ಲಿ ಮಾವು ಬೇವಿನ ತೋರಣ ಕಟ್ಟಿ ಮನೆ ಹಾಗೂ ದೇವಸ್ಥಾನಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಮನೆಯ ಮುಂದೆ ರಂಗೋಲಿ ಹಾಕಿ, ಹೊಸ ಬಟ್ಟೆ ಧರಿಸಿ ದೇವರಿಗೆ ಪೂಜೆಯನ್ನು ಮಾಡಿ ಬೇವು ಬೆಲ್ಲ ಸವಿಯುತ್ತಾ ಯುಗಾದಿಯನ್ನು ಸಂಭ್ರಮದಿಂದ ಸ್ವಾಗತಿಸಿದರು. ಮಾರನೇ ದಿನ ಹೊನ್ನೇರು ಕಟ್ಟುವ ಸಂಭ್ರಮದ ಹಿನ್ನೆಲೆಯಲ್ಲಿ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ಮಾರಮ್ಮನ ದೇವಾಲಯದ ಬಳಿ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು. ಅಲಂಕೃತ ಜೋಡೆತ್ತುಗಳ ಕೊಂಬಿಗೆ ಬಣ್ಣ ಬಳಿದು, ಹೂವಿನ ಅಲಂಕಾರ ಮಾಡಿ ಜಮೀನಿಗೆ ಹೋನ್ನೆರು ಕಟ್ಟುವ ಮೂಲಕ ಸ್ವಾಗತಿಸಲಾಯಿತು.ಗ್ರಾಮದಲ್ಲಿ ಎತ್ತಿನ ಗಾಡಿ ಮತ್ತು ಜೋಡೆತ್ತು ಗಳನ್ನು ಶೃಂಗರಿಸಿ ಕುಟುಂಬಸ್ಥರು ಮತ್ತು ಬಂಧುಗಳು ಒಟ್ಟಾಗಿ ಪೂಜೆ ಸಲ್ಲಿಸಿದ ನಂತರ ಜಮೀನಿಗೆ ಹೋಗಿ ಗೊಬ್ಬರ ಸುರಿದು ಬರುವುದು ಮತ್ತು ಹೊನ್ನೇರು ಕಟ್ಟುವ ಸಂಪ್ರದಾಯ ನೆರವೇರಿದವು. ವಿದ್ಯೆ, ಉದ್ಯೋಗಕ್ಕೆಂದು ನಗರ ಪ್ರದೇಶದಲ್ಲಿ ಇರುವ ಮಂದಿ ಸ್ವಗ್ರಾಮಗಳಿಗೆ ಬಂದಿದ್ದರು.
ದೇವಾಲಯ, ಹೊನ್ನೇರು ಕಟ್ಟುವುದು ಇತರೆ ಕಡೆಗಳಲ್ಲಿ ಹಳೆಯ ಸ್ನೇಹಿತರೊಂದಿಗೆ ಸಂಭ್ರಮದಿ ಕಾಲಕಳೆದರು. ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.
ಪೂರ್ವಜರ ಸಮಾಧಿಗಳಿಗೆ ತೆರಳಿ ಪೂಜೆ ಸಲ್ಲಿಸಿ ಪಾನಕ, ಕೋಸಂಬರಿ ವಿತರಿಸಿದರು. ಯುಗಾದಿ ಹಬ್ಬಕ್ಕೆ ಜೂಜಾಟಕ್ಕೆ ಅವಕಾಶ ಇರುವ ಕಾರಣ ಗ್ರಾಮೀಣ ಭಾಗದ ಶಾಲೆ, ಅಂಗನವಾಡಿ, ಜಗುಲಿ ಕಟ್ಟೆ ಇತರೆ ಕಡೆಗಳಲ್ಲಿ ಪಚ್ಚಿ, ಇಸ್ಫೀಟ್ ಇತರೆ ಜೂಜಾಟಗಳು ಜೋರಾಗಿದ್ದವು. ಇನ್ನೂ ಸಮಯ ಕಳೆಯಲೆಂದು ಗಟ್ಟೆಮನೆ ಇತರೆ ಗ್ರಾಮೀಣ ಆಟೋಟಗಳು ನಡೆದವು.
ಯುಗಾದಿ ವರ್ಷದ ತೊಡಕಿನ ದಿನವಾದ ಬುಧವಾರ ಎಲ್ಲೆಡೆ ಹೋಳಿ ಸಂಭ್ರಮ ಕಂಡು ಬಂದಿತು. ಮನೆ ಮುಂದೆ ದೊಡ್ಡ ಪಾತ್ರೆಯಲ್ಲಿ ಇಟ್ಟಿದ್ದ ಅರಿಶಿಣ ಮಿಶ್ರಣ ಮಾಡಿದ ನೀರನ್ನು ಪರಸ್ಪರ ಎರಚಿಕೊಂಡರು. ವಿವಿಧ ರೀತಿಯ ಬಣ್ಣದ ಪುಡಿ ಮತ್ತು ಬಣ್ಣ ಮಿಶ್ರಣ ಮಾಡಿದ ನೀರನ್ನು ಎರಚಿಕೊಂಡರು. ಮಕ್ಕಳು, ಯುವಕರು, ಮಹಿಳೆಯರು ಮತ್ತು ಎಲ್ಲಾ ವಯಸ್ಸಿನವರು ಸೇರಿ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡರು.