ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರಿತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ”.ಕವಿ ದ ರಾ ಬೇಂದ್ರೆ ಯವರ ರಚನೆ ನಮ್ಮ ಕನ್ನಡ ನಾಡಿನ ಹೊಸವರ್ಷದ ಪ್ರಸಿದ್ಧ ಗೀತೆಯಾಗಿದೆ.ಯುಗಾದಿ ಎಂಬುದು ಸಂಸ್ಕೃತ ಪದಗಳಾದ ಯುಗ ಅಂದರೆ ವಯಸ್ಸು ಮತ್ತು ಆದಿ ಎಂದರೆ ಆರಂಭ ಎಂಬ ಪದದಿಂದ ಬಂದಿದೆ. ಆದ್ದರಿಂದ, ಇದರ ಅರ್ಥ ಹೊಸ ಯುಗದ ಪ್ರಾರಂಭ ಎಂದು.
ನಮ್ಮ ಹಿಂದೂ ಕ್ಯಾಲೆಂಡರ್ ಅನುಸಾರವಾಗಿ ಚೈತ್ರ ಮಾಸವು ಹೊಸ ವರ್ಷವಾಗಿದೆ. ಈ ಮಾಸದಲ್ಲಿ ಎಲ್ಲೆಲ್ಲೂ ಗಿಡಮರಗಳು ಚಿಗುರಿ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಋತುಗಳ ರಾಜ ವಸಂತನಾಗಮನ ಇದೇ ಮಾಸದಲ್ಲಿ. ಭೂಮಿಯೆಲ್ಲಾ ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುತ್ತಿರುತ್ತದೆ.
ಮಲ್ಲಿಗೆಯ ಘಮ, ಮಾವಿನ ಸಿಹಿ, ಬೇವಿನ ಕಹಿ, ಹೊಂಗೆ ಮರದ ಚಿಗುರು ಅದರ ನೆರಳು ಎಲ್ಲವೂ ಹೊಸ ವರ್ಷದ ಯುಗಾದಿ ಹಬ್ಬವನ್ನು ಸ್ವಾಗತ ಮಾಡುತ್ತದೆ.
ಚೈತ್ರ ಮಾಸದಲ್ಲಿ ಮೊದಲ ದಿನ ಅಂದರೆ ಪಾಡ್ಯದಂದು ಬರುವ ಹಬ್ಬ ಯುಗಾದಿ, ವರ್ಷದ ಮೊದಲ ಹಬ್ಬವಾಗಿದ್ದು ಎಲ್ಲರಿಗೂ ಉಲ್ಲಾಸ, ಉತ್ಸಾಹದ ಹಬ್ಬವಾಗಿದೆ. ಎಲ್ಲ ಹಬ್ಬಗಳಲ್ಲಿ ಯುಗಾದಿಯು ಶ್ರೇಷ್ಠ. ಈ ಹಬ್ಬವನ್ನು ಭಾರತ ಪರ್ವದಲ್ಲಿ ಬೇರೆ-ಬೇರೆ ಹೆಸರಿನಿಂದ ಆಚರಿಸುತ್ತಾರೆ.ದಕ್ಷಿಣ ಭಾರತವನ್ನು ಆಳಿದ ಶಾಲಿವಾಹನನು ಚೈತ್ರಶುದ್ಧ ಪಾಡ್ಯಮಿಯಂದು ಶಾಲಿವಾಹನ ರಾಜ ಸಿಂಹಾಸನಾರೂಢ ನಾದನೆಂದೂ, ಆಗಿನಿಂದ ಶಾಲಿವಾಹನ ಶಕೆ ಆರಂಭವಾಯಿತೆಂದೂ ಹೇಳಲಾಗುತ್ತದೆ. ಹಿಂದುಗಳು ಶಾಲಿವಾಹನ ಶಕೆಯ ಸಂವತ್ಸರಗಳನ್ನಾಧರಿಸಿ ಆಯಾ ಸಂವತ್ಸರವನ್ನು ಚೈತ್ರ ಮಾಸದ ಪ್ರತಿಪದಿಯಿಂದ ಆರಂಭಿಸುವರು.
ಯುಗಾದಿಯಂದು ಸೂರ್ಯ ನಮಸ್ಕಾರ, ಪಂಚಾಂಗ ಶ್ರವಣ, ಬೇವು-ಬೆಲ್ಲ ಸೇವನೆ ಪ್ರಮುಖವಾದದ್ದು. ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ.ಜೀವನದಲ್ಲಿ ಬರೀ ಸಿಹಿಯೊಂದೇ ಇರದು, ಕಹಿಯೂ ಇರದು ಬಾಳು ಸಿಹಿಕಹಿಗಳ ಮಿಶ್ರಣವೆಂದು ತಿಳಿಸಲು ಹಿಂದಿನ ತಲೆಮಾರುಗಳಿಂದಲೂ ಬೇವುಬೆಲ್ಲ ತಿನ್ನುವ ಪದ್ದತಿ ಬಂದಿದೆ. ಹಾಗೆಯೇ ಬೇವಿನಲ್ಲಿ ಔಷಧೀಯ ಗುಣಗಳಿದ್ದು ನಮ್ಮ ದೇಹದಲ್ಲಿ ಸೇರಿ ರೋಗನಿರೋಧಕ ಶಕ್ತಿ ಹೊಂದುತ್ತದೆ. ದೇಹದ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಬೆಲ್ಲದಲ್ಲೂ ಖನಿಜಾಂಶಗಳಿದ್ದು ದೇಹದ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನ. ಅಲ್ಲದೆ ಮಹಾಭಾರತದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಅವನಿಗೆ ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನವೆಂದು ಪುರಾಣಗಳಲ್ಲಿ ಹೇಳಲಾಗಿದೆ.
ಈ ಸಮಯದಲ್ಲಿ ಯುಗಾದಿ ಪಾದಯತ್ರೆ ಒಂದು ರೀತಿಯ ಹಬ್ಬವಿದ್ದಂತೆ. ಈ ಯಾತ್ರೆಯನ್ನು ಕರ್ನಾಟಕ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಪ್ರಚಲಿತದಲ್ಲಿದೆ. ಯುಗಾದಿ ಪಾದಯಾತ್ರೆಯಲ್ಲಿ ಜನರು ಆಕರ್ಷಣೀಯ ದೇವರ ಉಡುಪುಗಳಂತೆ ವೇಷಭೂಷಣಗಳನ್ನು ಧರಿಸಿ, ಹಾಡು ಭಜನೆ ಮಾಡುತ್ತಾ ಸಾಗುತ್ತಾರೆ. ಯುಗಾದಿಯ ದಿನದಂದೇ ಮಂತ್ರಾಲಯ, ಶ್ರೀಶೈಲ, ತಿರುಪತಿ, ಧರ್ಮಸ್ಥಳ ಹೀಗೆ ಹಲವಾರು ಪುಣ್ಯಕ್ಷೇತ್ರಗಳನ್ನು ದರ್ಶನ ಪಡೆಯಲು ಪಾದಯಾತ್ರೆಯ ಮೂಲಕ ಅಲ್ಲಿಗೆ ತಲುಪುತ್ತಾರೆ.
‘ಯು’ ಗವ ಕಳೆದು
‘ಗಾ’ ಹಿಲವ ದೂರಮಾಡುತ
‘ದಿ’ ಗ್ವಿಜಯದ ಪಥದಲಿ
‘ಯ’ ತನವ ಮಾಡುತ
‘ಶು’ ಭಾರಂಭವ ಪ್ರಾರಂಭಿಸುತ
‘ಭಾ’ ವನೆಗಳ ಒಡನಾಟದಿ
‘ಶ’ ರದವ ದಾಟುತ
‘ಯ’ ಶಸ್ಸಿನ ಬೆನ್ನೇರಿ
‘ಗ’ ದಾಧರನ ನೆನೆಯುತ ಮುಗು
‘ಳು’ ನಗೆಯಲಿ ಯುಗಾದಿ
ಹಬ್ಬವ ಸ್ವಾಗತಿಸೋಣ.