ಬೆಂಗಳೂರು: ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಂದು ಪೊಲೀಸ್ ಠಾಣೆಯನ್ನು ಶಾಮಿಯಾನದಿಂದ ಮುಚ್ಚಿದ ಪ್ರಸಂಗ ನಡೆದಿದೆ.ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಗಡುಕರು ಇರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶಾಮಿಯಾನ ಹೊದಿಸುವಂತೆ ಪೊಲೀಸ್ ಆಯುಕ್ತ ದಯಾನಂದ್ ಸೂಚನೆ ನೀಡಿದ್ದಾರೆ. ಅದರಂತೆ ಠಾಣೆಯ ಸುತ್ತ ಸೈಡ್ ವಾಲ್ ಗಳನ್ನ ಕಟ್ಟಿ, ಆರೋಪಿಗಳು ಕಾಣದಂತೆ ಮಾಡಲಾಗಿದೆ.
ನಿನ್ನೆಯವರೆಗೆ ಅಭಿಮಾನಿಗಳು ಠಾಣೆಯ ಮುಂದೆ ಜಮಾಯಿಸಿದ್ದರು. ಈ ವೇಳೆ ಠಾಣೆ ಮುಂದೆ ಬ್ಯಾರಿಕೇಡ್ಗಳನ್ನು ಹಾಕಿದ್ದರು. ಆದರೆ ಇಂದು ಅಭಿಮಾನಿಗಳು ಕೂಡ ಠಾಣೆಯತ್ತ ಸುಳಿದಿಲ್ಲ. ಆದರೂ ಠಾಣೆಯ ಕಾಂಪೌಂಡ್ಗೆ ಶಾಮಿಯಾನ ಕಟ್ಟಿದ್ದು, ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮೊನ್ನೆ ಆರೋಪಿಗಳಿಗೆ ಠಾಣೆ ಒಳಗೆ ಬಿರಿಯಾನಿ ಕೊಟ್ಟಿದ್ದರು ಎಂದು ಹೇಳಲಾಗುತ್ತಿತ್ತು. ಈ ಬೆನ್ನಲ್ಲೇ ಇಂದು ಶಾಮಿಯಾನದಿಂದ ಮುಚ್ಚಿರುವುದು ಠಾಣೆ ಒಳಗಡೆ ಆರೋಪಿಗಳಿಗೆ ರಾಜಮರ್ಯಾದೆ ಕೊಡಲಾಗುತ್ತಿದೆಯಾ ಎಂಬ ಶಂಕೆ ವ್ಯಕ್ತವಾಗುತ್ತಿದೆ.