ಭಾರತ ಮತ್ತು ಆತಿಥೇಯ ಬಾಂಗ್ಲಾದೇಶ ನಡುವಣ ಗುರುವಾರ ರಾತ್ರಿ ನಡೆದ ಸ್ಯಾಫ್ 19 ವರ್ಷದೊಳಗಿನವರ ಮಹಿಳಾ ಫುಟ್ಬಾಲ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯ ಪೆನಾಲ್ಟಿ ಶೂಟೌಟ್ ನಂತರವೂ ಸಮಬಲದಲ್ಲಿ ಅಂತ್ಯಗೊಂಡಿತು. ಹೀಗಾಗಿ ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು.
90 ನಿಮಿಷಗಳ ಆಟದ ನಂತರ ಪಂದ್ಯ 1-1 ರಿಂದ ಕೊನೆಗೊಂಡಿತ್ತು. ಬಳಿಕ ರೆಫರಿ ನೇರವಾಗಿ ಪೆನಾಲ್ಟಿ ಶೂಟೌಟ್ಗೆ ಆದೇಶಿಸಿದರು.
ಗೋಲ್ ಕೀಪರ್ಗಳು ಸೇರಿದಂತೆ ಎರಡೂ ಕಡೆಯ ಎಲ್ಲಾ 11 ಆಟಗಾರರು ತಮ್ಮ ಪೆನಾಲ್ಟಿ ಕಿಕ್ನಲ್ಲಿ ಗೋಲು ಗಳಿಸಿದರು. 11-11 ಗೋಲು ಗಳಿಸಿ ಸಮಬಲ ಸಾಧಿಸಿದವು.
ಈ ವೇಳೆ ವಿಜೇತರನ್ನು ನಿರ್ಧರಿಸಲು ರೆಫರಿ ಎರಡೂ ತಂಡದ ನಾಯಕರನ್ನು ಕರೆದು ಟಾಸ್ ಮೊರೆ ಹೋದರು. ಟಾಸ್ ಗೆದ್ದ ಭಾರತ ತಂಡದವರು ಸಂಭ್ರಮಿಸಿದರು. ರೆಫರಿ ನಿರ್ಧಾರ ವಿರುದ್ಧ ಬಾಂಗ್ಲಾ ತಂಡದ ಅಭಿಮಾನಿಗಳು ಬಾಟಲಿಗಳನ್ನು ಎಸೆದು ಗಲಾಟೆ ಮಾಡಿದರು. ಒಂದು ಗಂಟೆಗೂ ಹೆಚ್ಚು ಸಮಯದ ನಂತರ, ಪಂದ್ಯದ ರೆಫರಿ ತಮ್ಮ ನಿರ್ಧಾರವನ್ನು ಬದಲಿಸಿದರು. ಭಾರತ ಮತ್ತು ಬಾಂಗ್ಲಾದೇಶವನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು.