ಅಂಡರ್-19 ವಿಶ್ವಕಪ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಮತ್ತೆ ಘರ್ಜಿಸಿದ ಭಾರತ ಯಂಗ್ ಟೈಗರ್ಸ್ ಅಮೆರಿಕ ತಂಡವನ್ನು ಉಡೀಸ್ ಮಾಡಿದೆ.ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಿದ ಭಾರತ 201 ರನ್ಗಳ ಬೃಹತ್ ಜಯ ಸಾಧಿಸಿದೆ. ಇದರೊಂದಿಗೆ ಲೀಗ್ ಸುತ್ತಿನಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಸೂಪರ್ ಸಿಕ್ಸ್ ಹಂತಕ್ಕೆ ಲಗ್ಗೆ ಇಟ್ಟಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 326 ರನ್ ಗಳಿಸಿತ್ತು. ಅರ್ಶಿನ್ ಕುಲಕರ್ಣಿ 8 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 108 ರನ್ ಸಿಡಿಸಿದರು. ಮುಶೀರ್ 73, ನಾಯಕ ಉದಯ್ ಸಾಹರನ್ 35, ಪ್ರಿಯಾಂಶು ಮೊಲಿಯಾ 27, ಸಚಿನ್ ದಾಸ್ 20 ರನ್ ಗಳಿಸಿದರು.
327 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಅಮೆರಿಕ ತಂಡ 8 ವಿಕೆಟ್ ಕಳೆದುಕೊಂಡು ಕೇವಲ 125 ರನ್? ಗಳಿಸಲಷ್ಟೇ ಶಕ್ತವಾಯಿತು. ಅಮೆರಿಕ ಬ್ಯಾಟರ್ ಉತ್ಕರ್ಷ್ ಶ್ರೀವಾಸ್ತವ 40 ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್ ಸಹ ಉತ್ತಮ ಪ್ರದರ್ಶನ ನೀಡಲಿಲ್ಲ. ಭಾರತದ ಪರ ನಮನ್ ತಿವಾರಿ 4 ವಿಕೆಟ್ ಪಡೆದರು. ಅರ್ಶಿನ್ ಕುಲಕರ್ಣಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಲೀಗ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾ ಪಡೆಯನ್ನು ಮಣಸಿದ್ದ ಭಾರತ, ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧವೂ 201 ರನ್ಗಳಿಂದ ಗೆಲುವು ಸಾಧಿಸಿತ್ತು. ಇದೀಗ ಲೀಗ್ನ ಕೊನೆಯ ಪಂದ್ಯದಲ್ಲೂ ಅಮೆರಿಕ ವಿರುದ್ಧ 201 ರನ್ಗಳ ಬೃಹತ್ ಗೆಲುವು ದಾಖಲಿಸಿ, 3 ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ.