ಬೆಂಗಳೂರು ಗ್ರಾಮಾಂತರ ಜಿಲ್ಲೆ: ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ-1098 ಜಂಟಿಯಾಗಿ ದೊಡ್ಡಬಳ್ಳಾಪುರದ ವಿವಿಧ ಸ್ಥಳಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕರನ್ನು ದುಡಿಮೆಗೆ ನೇಮಿಸಿಕೊಂಡಿರುವ ಅಂಗಡಿಗಳು, ಗ್ಯಾರೇಜುಗಳು, ಬೇಕರಿಗಳು, ಚಿಕನ್ ಮತ್ತು ಮಟನ್ ಅಂಗಡಿಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ, ತಪಾಸಣೆ ಕೈಗೊಂಡು 02 ಮಕ್ಕಳನ್ನು ರಕ್ಷಿಸಲಾಗಿದೆ.
ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು 14 ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದಲ್ಲಿ ಅಂತಹವರಿಗೆ ಕನಿಷ್ಠ 06 ತಿಂಗಳಿಗಿಂತ ಕಡಿಮೆ ಇಲ್ಲದಂತೆ ಮತ್ತು ಗರಿಷ್ಠ 02 ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ರೂ. 20,000/- ಗಳಿಗಿಂತ ಕಡಿಮೆ ಇಲ್ಲದಂತೆ ಮತ್ತು ರೂ. 50,000/- ಸಾವಿರದವರೆಗೊಂಡ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಹಾಗೂ ವಿವಿಧ ಅಂಗಡಿಗಳು, ಗ್ಯಾರೇಜುಗಳು, ಬೇಕರಿಗಳು, ಚಿಕನ್ ಮತ್ತು ಮಟನ್ ಅಂಗಡಿಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕುರಿತು ಕರಪತ್ರವನ್ನು ಮತ್ತು ಭಿತ್ತಿಪತ್ರಗಳನ್ನು ಅಂಗಡಿಗಳ ಮಾಲೀಕರಿಗೆ ವಿತರಿಸುವ ಮೂಲಕ ಇನ್ನು ಮುಂದೆ ತಮ್ಮ ಸುತ್ತಮುತ್ತಲಿನಲ್ಲಿ ಯಾವುದೇ ಮಕ್ಕಳನ್ನು ನೇಮಿಸಿ ಕೊಂಡಿರುವುದು ಕಂಡುಬಂದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಮತ್ತು ಪೊಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 112 ಕರೆ ಮಾಡುವುದರ ಮೂಲಕ ಮಕ್ಕಳನ್ನು ರಕ್ಷಣೆ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ಅಧಿಕಾರಿಗಳು ಸೂಚಿಸಿದರು.
ರಕ್ಷಿಸಿದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ, ಮಕ್ಕಳನ್ನು ದುಡಿಮೆಗೆ ನೇಮಿಸಿಕೊಂಡ ಮಾಲೀಕರ ವಿರುದ್ಧ ಕಾನೂನು ಕ್ರಮಜರುಗಿಸಲು ಕ್ರಮವಹಿಸಲಾಗಿದೆ.ಅನಿರೀಕ್ಷಿತ ತಪಾಸಣೆ ಹಾಗೂ ದಾಳಿಯಲ್ಲಿ ಕಾರ್ಮಿಕ ಅಧಿಕಾರಿ ನಾಗೇಂದ್ರ ಹೆಚ್ ಆರ್ , ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಸುಬ್ಬಾರಾವ್ ಎಸ್, ನಗರ ಪೊಲೀಸ್ ಠಾಣೆಯ ಪಿ ಎಸ್ ಐ ಕೃಷ್ಣಪ್ಪ, ಕಾರ್ಮಿಕ ನಿರೀಕ್ಷಕ ದಯಾನಂದ್ ಸಾಗರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿ ಕುಮಾರ್, ಮಕ್ಕಳ ರಕ್ಷಣಾ ಘಟಕದ ನರಸಿಂಹರಾಜು, ಮಕ್ಕಳ ಸಹಾಯ ವಾಣಿಯ ಸಿಬ್ಬಂದಿ ಶ್ರೀನಿವಾಸ್, ಸೌಮ್ಯ ಹಾಜರಿದ್ದರು.