ಡಿಸ್ಪುರ್: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ `ಅಶ್ಲೀಲ ವಿಡಿಯೋ’ ಪ್ರಕರಣ ಸಂಬಂಧ ಇದೇ ಮೊದಲ ಬಾರಿಗೆ ಗುವಾಹಟಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ.
ಗುವಾಹಟಿಯಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಇದೊಂದು ಬಹಳ ಆಘಾತಕಾರಿ ಘಟನೆಯಾಗಿದೆ. ಯಾವುದೇ ಕಾರಣಕ್ಕೂ ಇದನ್ನು ಸಹಿಸಲು ಸಾಧ್ಯವಿಲ್ಲ. ನಾವು ದೇಶದ `ಮಾತೃಶಕ್ತಿ’ ಜೊತೆ ನಿಲ್ಲುತ್ತೇವೆ. ಈ ವಿಚಾರದಲ್ಲಿ ಬಿಜೆಪಿಯ ನಿಲುವು ಸ್ಪಷ್ಟವಾಗಿದೆ. ನಾನು ಕಾಂಗ್ರೆಸ್ ಸರ್ಕಾರವನ್ನು ಕೇಳಲು ಬಯಸುತ್ತೇನೆ. ಕರ್ನಾಟಕದಲ್ಲಿ ಯಾರ ಸರ್ಕಾರವಿದೆ? ಅವರು ಯಾಕೆ ಇದುವರೆಗೆ ಕ್ರಮ ಕೈಗೊಂಡಿಲ್ಲ?. ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿದೆ ಎಂದಿದ್ದಾರೆ.
ನಾವು ತನಿಖೆಯ ಪರವಾಗಿದ್ದೇವೆ, ತನಿಖೆ ನಡೆಯಲಿ. ಇದು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯ, ಹೀಗಾಗಿ ನಾವು ಈ ಬಗ್ಗೆ ಕ್ರಮ ಕೈಗೊಳ್ಳಲು ಆಗಲ್ಲ. ನಮ್ಮ ಮೈತ್ರಿ ಪಕ್ಷ ಜೆಡಿಎಸ್ ಕೂಡ ಇದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. ಇಂದು ಅವರ ಕೋರ್ ಕಮಿಟಿ ಸಭೆ ಇದ್ದು, ಆ ಸಭೆಯಲ್ಲಿ ಪ್ರಕರಣ ಸಂಬಂಧ ಕ್ರಮಕೈಗೊಳ್ಳಲಿದ್ದಾರೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ನಾರಿ ಶಕ್ತಿಗೆ ಯಾವುದೇ ರೀತಿಯಲ್ಲೂ ಅವಮಾನ ನಾವು ಸಹಿಸುವುದಿಲ್ಲ. ಮಾಧ್ಯಮಗಳಲ್ಲಿ ವರದಿ ಆಗಿರುವ ಈ ಪ್ರಕರಣವನ್ನು ಕಟು ಶಬ್ದಗಳಲ್ಲಿ ಖಂಡಿಸುತ್ತೇನೆ. ನಮ್ಮನ್ನು ಪ್ರಶ್ನಿಸುವ ನಾವು ಉತ್ತರಿಸಬೇಕೆನ್ನುವ ಪ್ರಿಯಾಂಕ ತನ್ನದೇ ಪಕ್ಷದ ಸಿಎಂ ಡಿಸಿಎಂ ಅವರನ್ನು ಪ್ರಶ್ನೆ ಮಾಡಲಿ. ಈ ವಿಡಿಯೋ ಬಗ್ಗೆ ಮೊದಲೇ ಗೊತ್ತಿದ್ದೂ ಯಾಕೆ ಕ್ರಮ ಕೈಗೊಳ್ಳಲಿಲ್ಲ. ಕಾನೂನು ಸುವ್ಯವಸ್ಥೆ ರಾಜ್ಯದ ಜವಾಬ್ದಾರಿ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.