ಬೆಂಗಳೂರು: ನಗರದ ಪ್ರತಿಷ್ಠಿತ ಸುಗಮ ಸಂಗೀತ ಸಂಸ್ಥೆಗಳಲ್ಲೊಂದಾದ ಪಂಚಾಮೃತ ಸುಗಮ ಸಂಗೀತ ಅಕಾಡಮಿಯು ತನ್ನ ವಿಳಾಸದ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತಿಂಗಳ ನಿರಂತರ ಕಾರ್ಯಕ್ರಮ ‘ ಇಂಚರ-124” ಮತ್ತು ಭಗವದ್ಗೀತೆ ಕನ್ನಡ ಕವಿಗಳು ಕಂಡಂತೆ ‘ ಬಿಂದು – 17’ ಯಶಸ್ವಿಯಾಗಿ ನಡೆಯಿತು.
ಮೊದಲಲ್ಲಿ ನಮ್ಮನ್ನಗಲಿದ ಚನೈ ಕನ್ನಡಸಂಘದಸದಸ್ಯರೂ ಕವಿಯೂ ಮತ್ತು ಸಾಂಸ್ಕೃತಿಕ ಧಾರ್ಮಿಕಪೋಷಕರೂ ಆದ ಶ್ರೀ ಹೆಚ್ ಆರ್ ಗಂಗಾಧರಯ್ಯನವರು ಮತ್ತು ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಬರೆದು90 ಕ್ಕೂ ಹೆಚ್ಚು ಕೃತಿಗಳನ್ನು ನಮಗೆ ಕೊಟ್ಟ ಕವಿತಾಕೃಷ್ಣ
ಎಂದೇ ಹೆಸರಾದ ಶ್ರೀ ಕೆ ಕೆ ರಾಜಣ್ಣನವರಿಗೆ ಮೌನನಮನ ಹಾಗೂ ಅವರ ಸಾಧನೆಯನ್ನು ಕುರಿತ ಮಾತುಗಳನ್ನು ನಡೆಸಲಾಯಿತು.
ನಂತರ ಭಗವದ್ಗೀತೆಯನ್ನು ಕುರಿತ ಪಠಣ ವಾಚನ ಗಾಯನ ಗಮಕ ವ್ಯಾಖ್ಯಾನ ನೆರವೇರಿತು.
ಅಕ್ಷಯ್ ಎಂ ಭಾರದ್ವಾಜ್ (ಶ್ಲೋಕ) ನವ್ಯ ಪಿ (ಶ್ಲೋಕಾರ್ಥ) ಶ್ರೀ ಬಿ ಎಸ್ ನಾರಾಯಣ್(ಗಮಕ ವಾಚನ) ಶ್ರೀಮತಿ ವಾಸುಕಿ ಶಶಿಧರ್ (ಗಾಯನ) ಹಾಗೂ ಭ ರಾ ವಿಜಯಕುಮಾರ್ (ವಿಶ್ಲೇಷಣೆ) ನೀಡಿದರು. ಗೀತೆಯ 17 ನೇ ಅಧ್ಯಾಯದಲ್ಲಿ ಬರುವ ಗುಣತ್ರಯ ವಿಭಾಗ ತತ್ವವನ್ನೂ ಹಾಗೂ ಇಂದಿನ ದಿನಮಾನಕ್ಕೆ ನಮ್ಮ ಬದುಕಿನ ಔನ್ನತ್ಯಕ್ಕೆ ಇವುಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನೂ ಸರಳವಾಗಿ ವಿವರಿಸಲಾಯಿತು.
ಕನ್ನಡದಲ್ಲಿನ ಎರಡು ಅಪೂರ್ವ ಗೀತಾನುವಾದದ ಕೃತಿಗಳಾದ ಕಳೆದ ಶತಮಾನದಲ್ಲಿ ಪ್ರಕಟವಾದವೆಂಕಟರಾವ್ ನಾಯಕರವರ ಗೀತಾ ದ್ವಿಪದಿಗಳು ಹಾಗೂ ಎ ಜಿ ಕೃಷ್ಣರಾವ್ ರವರ ವಾರ್ಧಕಷಟ್ಪದಿಯ ಕೃತಿಗಳನ್ನು ಪರಿಚಯಿಸಲಾಯಿತು. ಗಾಯತ್ರಿ ಕೇಶವರವರ ಮಾರ್ಗದರ್ಶನದಲ್ಲಿ ಅಕಾಡಮಿಯ ವಿದ್ಯಾರ್ಥಿಗಳು ಎಸ್ ವಿ ಪರಮೇಶ್ವರ ಭಟ್ಟರ “ತಿಳಿಮುಗಿಲ ತೊಟ್ಟಿಲಲಿ..
ಗೀತೆಯನ್ನು ಹಾಡಿದರು. ಶ್ರೀಮತಿ ಗಾಯತ್ರಿಕೇಶವರವರು ಕವಿತಾಕೃಷ್ಣರ “ಯಾರ ಕೊಳಲ ಗಾನ ಕೇಳಿ” ಎಂಬ ಗೀತೆಯನ್ನು ಹಾಡಿದರು. ಅಕಾಡಮಿಯ ಗೌರವಾಧ್ಯಕ್ಷರಾದ ಎ ಎಂ ಚಂದ್ರಶೇಖರ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕವಿಗಳಾದ ಶಂಕರ್ ಜ್ಯೋತಿಪ್ರಸಾದ್ ನರಸಿಂಹಮೂರ್ತಿ ಕೃಷ್ಣಮೂರ್ತಿ ಮೊದಲಾಗಿ ಹಲವು ಕಲಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.