ಮಂಡ್ಯ: ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣ ಮಾಡದಿರಲು ಸಚಿವ ಮುನಿರತ್ನ ನಿರ್ಧರಿಸಿದ್ದಾರೆ. ಚಿತ್ರ ನಿರ್ಮಾಪಕರು ಆಗಿರುವ ಮುನಿರತ್ನ ಅವರು, ಉರಿಗೌಡ-ನಂಜೇಗೌಡ ಕುರಿತು ಚಿತ್ರ ನಿರ್ಮಾಣ ಮಾಡಲು ನಿರ್ಧರಿಸಿ ಈ ಸಂಬಂಧ ಈಗಾಗಲೇ ಸಿನಿಮಾ ಜಾಹೀರಾತು ಪೋಸ್ಟರ್ ಬಿಡುಗಡೆಗೊಳಿಸಿದ್ದರು. ರಾಜಕೀಯ ವಲಯದಲ್ಲಿ ಈ ವಿಷಯ ಆರೋಪ ಪ್ರತ್ಯಾರೋಪಗಳಿಗೆ ಎಡೆಮಾಡಿಕೊಟ್ಟಿತ್ತು. ಇಂದು ಆದಿಚುಂಚುನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಚಿತ್ರ ನಿರ್ಮಾಣ ಮಾಡುವುದಿಲ್ಲ ಎಂದು ಮುನಿರತ್ನ ತಿಳಿಸಿದ್ದಾರೆ.
ನಿರ್ಮಾಲನಾಂದ ಸ್ವಾಮೀಜಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಉರಿಗೌಡ- ನಂಜೇಗೌಡ ಸಿನಿಮಾ ಮಾಡುವುದನ್ನ ಕೈ ಬಿಡುವಂತೆ ಸ್ವಾಮೀಜಿ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಯ ಮಾತಿನಂತೆ ಸಿನಿಮಾ ನಿರ್ಮಾಣ ಮಾಡದಿರಲು ನಿರ್ಧರಿಸಿರುವುದಾಗಿ ಮುನಿರತ್ನ ತಿಳಿಸಿದರು.
ಉರಿಗೌಡ, ನಂಜೇಗೌಡ ಚಿತ್ರ ನಿರ್ಮಾಣದ ಆಲೋಚನೆ ಇರಲಿಲ್ಲ. ಆದ್ರೆ, ಹೆಚ್.ಡಿ ಕುಮಾರಸ್ವಾಮಿ ಹೇಳಿದ ಬಳಿಕ ಚಿತ್ರ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಬೇಕೆಂದು ಯೋಚನೆ ಮಾಡಿದ್ದೆ. ಆದರೆ, ಇದೀಗ ಈ ಚಿತ್ರ ನಿರ್ಮಾಣ ಮಾಡಲ್ಲ ಎಂದು ನಾನು ಶ್ರೀಗಳಿಗೆ ತಿಳಿಸಿದ್ದೇನೆ. ನಾನೊಬ್ಬ ನಿರ್ಮಾಪಕನಾಗಿ ಈ ಚಿತ್ರ ಮಾಡುತ್ತೇನೆ ಎಂದು ಹೇಳಿದ್ದೆ. ಎಲ್ಲವೂ ಸತ್ಯ ಘಟನೆ ಎಂದು ಸಿನಿಮಾ ಮಾಡಲು ಆಗಲ್ಲ. ಉರಿಗೌಡ, ದೊಡ್ಡ ನಂಜೇಗೌಡ ಬಗ್ಗೆ ಸಂಶೋಧನೆ ನಡೆಯುತ್ತಿದೆ ಎಂದು ಹೇಳಿದರು.
Leave a Review