ತಿಪಟೂರು: ಒಂದೇ ಸೂರಿನಡಿ ಸರ್ಕಾರದ ಎಲ್ಲಾ ಸವಲತ್ತುಗಳು ದೊರಕಿಸಿಕೊಡುವ ಸರ್ಕಾರದ ಮಹತ್ವಾಕಾಂಕ್ಷೆಯ ಕರ್ನಾಟಕ ಒನ್ ಸಮಗ್ರ ನಾಗರೀಕ ಸೇವಾಕೇಂದ್ರದ ಪ್ರಯೋಜನ ಪಡೆಯಿರಿ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ಹಳೆ ಬಸ್ ನಿಲ್ದಾಣದ ಮುಂಬಾಗ ನಗರಸಭಾ ಮಳಿಗೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕರ್ನಾಟಕ ಒನ್ ಸಮಗ್ರ ನಾಗರೀಕ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದಲಾದ ಕಾಲಘಟ್ಟದಲ್ಲಿ ಸಮಯ ಎನ್ನುವುದು ಪ್ರಮುಖವಾಗುತ್ತಿದೆ, ಎಲ್ಲಾ ಇಲಾಖೆಗಳನ್ನು ಸಂಪರ್ಕಿಸಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದು ದುರ್ಲಭ.
ಇಂತಹ ಹೊರೆಯನ್ನು ತಪ್ಪಿಸಲೆಂದೇ ಸರ್ಕಾರವು ಇಂತಹ ಮಹತ್ವಾಕಾಂಕ್ಷೆಯ ಯೋಜನೆಯಾದ ಕರ್ನಾಟಕ ಒನ್ ಸಮಗ್ರ ನಾಗರೀಕ ಸೇವಾ ಕೇಂದ್ರವನ್ನು ತೆರೆದಿದೆ. ಸರ್ಕಾರದ ಬಹುತೇಕ ಸೌಲಭ್ಯಗಳನ್ನು ಈ ಒಂದು ಸೇವಾಕೇಂದ್ರದ ಮೂಲಕ ಪಡೆದುಕೊಳ್ಳಬಹುದು ಎಂದರು.
ವೈದ್ಯರಾದ ಶ್ರೀರಂಗ ಆಸ್ಪತ್ರೆಯ ಡಾ. ವಿವೇಚನ್ ಮಾತನಾಡಿ, ಇಂತಹ ಸಮಗ್ರಸೇವಾ ಕೇಂದ್ರಗಳನ್ನು ಪ್ರತಿಯೊಬ್ಬ ನಾಗರೀಕರು ಬಳಸಿಕೊಂಡು ತಮ್ಮ ಅಮೂಲ್ಯಸಮಯವನ್ನು ಉಳಿಸಬಹುದು ಜೊತೆಗೆ ತಂತ್ರಜ್ಞಾನದ ಅರಿವನ್ನು ಬಳಸಿಕೊಂಡು
ತಮ್ಮ ಕೆಲಸ-ಕಾರ್ಯಗಳನ್ನು ಮಾಡಿಕೊಳ್ಳಬಹುದೆಂದು ಕರೆನೀಡಿದರು.
ವೈದ್ಯ ಡಾ.ಜಿ.ಎಸ್.ಶ್ರೀಧರ್ ಮಾತನಾಡಿ, ತಂತ್ರಜ್ಞಾನ ಮತ್ತು ವಿಜ್ಞಾನ ಬೆಳೆದಂತೆ ಪ್ರತಿಯೊಬ್ಬರೂ ದೂರದ ಮಾಹಿತಿಗಳನ್ನು ಕುಳಿತಲ್ಲಿಯೇ ಪಡೆದುಕೊಳ್ಳುತ್ತಿದ್ದಾರೆ, ಅದರಂತೆಯೇ ಸರ್ಕಾರದ ಸೌಲಭ್ಯಗಳನ್ನೂ ಇದೇ ಮಾದರಿಯಲ್ಲಿ ಒಂದೇ ಸೂರಿನಡಿ ಪಡೆದುಕೊಳ್ಳಿ ಎಂದರು.
ಇ-ಆಡಳಿತ ಇಲಾಖೆಯ ಸಂಯೋಜನಾಧಿಕಾರಿಗಳಾದ ಎಲ್.ಉಮೇಶ್, ಸುರೇಶ್, ಎಆರ್ಟಿಓ ಸುಧಾಮಣಿ, ಸಿಡಿಪಿಓ ಅಶೋಕ್, ಬೆಸ್ಕಾಂ ಅಧಿಕಾರಿ ಮನೋಹರ್, ಗ್ರೇಡ್-2 ತಹಶೀಲ್ದಾರ್ ಜಗನ್ನಾಥ್, ಶಿರಸ್ತೇದಾರ್ ರವಿಕುಮಾರ್, ಕೆ.ಎಂ.ಎಫ್. ನಿರ್ದೇಶಕ ಪ್ರಕಾಶ್, ಪತ್ರಕರ್ತ ಬಿ.ಟಿ.ಕುಮಾರ್, ರೋಹನ್ ರಾಜ್, ಎಐಟಿಯುಸಿ ಗೋವಿಂದರಾಜು, ಮುಖಂಡರಾದ ಶಾಂತಪ್ಪ, ಲೋಕನಾಥ್ ಸಿಂಗ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.