ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ವಿ.ಸೋಮಣ್ಣ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ನಿನ್ನೆ ಸಂಜೆ ಸೋಮಣ್ಣ ಅವರು ದೇವೇಗೌಡ ಅವರನ್ನು ಪದ್ಮನಾಭನಗರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇಬ್ಬರು ಮುಖಂಡರ ಮಾತುಕತೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಜರಿದ್ದರು.
ಸುಮಾರು ಒಂದು ಘಂಟೆಗಳ ಕಾಲ ಮಾತುಕತೆ ನಡೆದಿದ್ದು, ಮುಂದಿನ ರಾಜಕೀಯ ನಿರ್ಧಾರಗಳ ಬಗ್ಗೆ ಇಬ್ಬರು ಮುಖಂಡರು ಪರಸ್ಪರ ಚರ್ಚೆ ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ವರುಣಾ ಹಾಗೂ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಳ್ಳಲು ಕಾರಣರಾದವರ ಬಗ್ಗೆ ಪ್ರಸ್ತಾಪಿಸಿ ದೇವೇಗೌಡರ ಬಳಿ ತಮ್ಮ ಅಳಲು ತೋಡಿಕೊಂಡರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ದೇವೇಗೌಡರು ತಾವು ಸಹ ರಾಜಕಾರಣದಲ್ಲಿ ಏಳುಬೀಳು ಕಂಡಿದ್ದು, ಹಾಸನ ಮತ್ತು ತುಮಕೂರು ಕ್ಷೇತ್ರದಲ್ಲಿ ಪರಾಭವಗೊಂಡಿದ್ದನ್ನು ಪ್ರಸ್ತಾಪಿಸಿ ರಾಜಕೀಯದಲ್ಲಿ ಇದೆಲ್ಲಾ ಸಹಜ ಎದೆಗುಂದದೆ ಎದುರಿಸಬೇಕು ಎಂದು ಧೈರ್ಯ ತುಂಬಿದರು ಎನ್ನಲಾಗಿದೆ.
ಇದೀಗ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಸೋಮಣ್ಣಗೆ ದೇವೇಗೌಡರು ಸಲಹೆ ಮಾಡಿದರು ಎನ್ನಲಾಗಿದೆ. ಇದಕ್ಕೆ ಸೋಮಣ್ಣ ಪರೋಕ್ಷವಾಗಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ಹಂತದಲ್ಲಿ ಸೋಮಣ್ಣ ದೇವೇಗೌಡರ ಬಳಿ ತಮ್ಮ ಹಿಂದಿನ ಒಡನಾಟಗಳ ಬಗ್ಗೆಯೂ ಪ್ರಸ್ತಾಪಿಸಿದರು ಎನ್ನಲಾಗಿದೆ.
ಮಾತುಕತೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿರುವ ಸೋಮಣ್ಣ, ದೇವೇಗೌಡರದು ತಮ್ಮದು ಹಳೆಯ ಬಾಂಧವ್ಯ ಮುಂಚೆ ಅವರ ಜತೆಯಲ್ಲಿಯೇ ಇದ್ದೆ. ಅವರಿಂದಲೇ ಬೆಳೆದೆ. ಇಷ್ಟೆಲ್ಲಾ ಶಕ್ತಿ ಬರಲು ಅವರೇ ಕಾರಣ ಎಂದು ಹೇಳಿದ್ದಾರೆ.