ಇದು ಅದ್ಭುತ. ವೈಭವ್ ಸೂರ್ಯವಂಶಿ ಎಂಬ ೧೪ ವರ್ಷದ ಬಾಲಕ ತನ್ನ ಅತ್ಯಮೋಘ ಬ್ಯಾಟಿಂಗ್ ನಿಂದ ಮತ್ತೊಮ್ಮೆಕ್ರಿಕೆಟ್ ವಿಶ್ವವನ್ನು ಚಕಿತಗೊಳಿಸಿದ್ದಾನೆ. ಕೇವಲ ೪೨ ಎಸೆತಗಳಲ್ಲಿ ೧೪೪ ರನ್ ಚೆಚ್ಚಿದ್ದಾರೆ. ಅದರಲ್ಲಿ ೧೧ ಬೌಂಡರಿ, ೧೫ ಸಿಕ್ಸ್! ಸ್ಟ್ರೈಕ್ ರೇಟ್ ೩೪೨.೮೫! ೧೭ ಎಸೆತದಲ್ಲಿ ಅರ್ಧಶತಕ ಬಾರಿಸಿದ ಬಾಲಕ ಶತಕದ ಗಡಿ
ದಾಟಲು ತೆಗೆದುಕೊಂಡದ್ದು ಕೇವಲ ೩೨ ಎಸೆತ! ಇಂತಹ ಕಂಡುಕೇಳರಿಯದ ಘಟನೆ ನಡೆದಿರುವುದು ಕತಾಕ್ ನಲ್ಲಿ ಶುಕ್ರವಾರ ಪ್ರಾರಂಭ ಆಗಿರುವ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್
೨೦೨೫ ಪಂದ್ಯಾವಳಿಯ ಭಾರತ ಎ ಮತ್ತು ಯುಎಇ ನಡುವಿನ ಪಂದ್ಯದಲ್ಲಿ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿತೇಶ್ ಶರ್ಮಾ ನೇತೃತ್ವದ ಭಾರತಎ ತಂಡ ೧೬ ರನ್ ಗಳಿರುವಾಗಲೇ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ನಂತರ ವೈಭವ್ ಸೂರ್ಯವಂಶಿ ಆಡಿದ್ದೇ ಆಟವಾಯಿತು. ಭಾರತ ತಂಡ ಕೇವಲ ೪ ಓವರ್ ಗಳಲ್ಲಿ೫೦ ರನ್ ಗಳ ಗಡಿ ದಾಟಿತು. ಭಾರತ ತಂಡ ೮೨ ರನ್ ಗಳಿಸಿದ್ದಾಗ ವೈಭವ್ ಅವರು ಕೇವಲ ೧೭ ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ೩೨ ಎಸೆತದಲ್ಲಿ ಶತಕ ಅವರ ರನ್ ಗಳಿಕೆ ವೇಗಕ್ಕೆ ಕಡಿವಾಣ ಹಾಕಲು ಯುಎಇ ಬೌಲರ್ ಗಳಿಂದ ಸಾಧ್ಯವಾಗಲೇ ಇಲ್ಲ.
ತಂಡದ ಮೊತ್ತ ೧೫೦ ದಾಟುವ ಮೊದಲೇ ವೈಭವ್ ಸೂರ್ಯವಂಶಿ ಅವರು ಶತಕವನ್ನೂ ಪೂರೈಸಿಕೊಂಡರು. ಅವರ ಶತಕ ಕೇವಲ ೩೨ ಎಸೆತಗಳಿಂದ ಬಂದಿತ್ತು. ಮತ್ತೊಂದು ತುದಿಯಲ್ಲಿ ನಮನ್ ಧಿರ್(೨೩ ಎಸೆತದಲ್ಲಿ ೩೪) ಅವರು ವೈಭವ್ ಗೆ ಉತ್ತಮ ಸಾಥ್ ನೀಡಿದರು. ಇವರಿಬ್ಬರು ೨ನೇ ವಿಕೆಟ್ ಗೆ ೧೬೩ ರನ್ ಗಳ ಅದ್ಬುತ ಜೊತೆಯಾಟವಾಡಿದರು. ಹೀಗಾಗಿ ಕೇವಲ ೧೧. ಓವರ್ ಗಳಲ್ಲೇ ತಂಡ ೧೬೯ ರನ್ ಪೇರಿಸಿದರು. ಈ ಹಂತದಲ್ಲಿ ನಮನ್ ಧಿರ್ ಅವರು ಔಟಾಗಿ ಪೆವಿಲಿಯನ್ ಸೇರಿಕೊಂಡರು.
ಇದಾದ ಬಳಿಕ ನಾಯಕ ಜಿತೇಶ್ ಶರ್ಮಾ ಅವರನ್ನು ಸೇರಿಕೊಂಡ ವೈಭವ್ ತಮ್ಮ ಬ್ಚಾಟಿಂಗ್ ವೈಭವವನ್ನು ಮುಂದುವರಿಸಿದರು. ಆದರೆ ತಂಡದ ಮೊತ್ತ ೧೯೫ ಆಗಿದ್ದಾಗ ಮುಹಮ್ಮದ್ ಫರಾಝುದ್ದೀನ್ ಅವರ ಬೌಲಿಂಗ್ ನಲ್ಲಿ ಆಹ್ಮದ್ ತಾರೀಕ್ ಅವರಿಗೆ ಕ್ಯಾಚಿತ್ತು ಔಟಾದರು. ಇದಾದ ಬಳಿಕ ಜಿತೇಶ್ ಶರ್ಮ ಅವರು ಕೇವಲ ೩೨ ಎಸೆತದಲ್ಲಿ ೮೩ ರನ್ ಸಿಡಿಸಿದರು. ಅವರು ೮ ಬೌಂಡರಿ ಮತ್ತು ೬ ಸಿಕ್ಸರ್ ಸಿಡಿಸಿದರು. ಅಂತಿಮವಾಗಿ ಭಾರತ ಎ ತಂಡ ನಿಗದಿತ ೨೦ ಓವರ್ ಗಳಲ್ಲಿ ೪ ವಿಕಟ್ ನಷ್ಟಕ್ಕೆ ೨೯೭ ರನ್ ಗಳ ಬೃಹತ್
ಮೊತ್ತ ದಾಖಲಿಸಿತು.



