ನೆಲಮಂಗಲ: ಶ್ರೀಮಠದ ವಾರ್ಷಿಕೋತ್ಸವದಲ್ಲಿ ಹಲವಾರು ಸಾಧಕರುಗಳ ಮಧ್ಯೆ ನನ್ನನ್ನು ಗುರುತಿಸಿ ನೀಡಿದ ಕೊಡಮಾಡುವ ಪ್ರಶಸ್ತಿಯನ್ನು ಅತ್ಯಂತ ವಿನಯ ಮತ್ತು ಪ್ರೀತಿಯಿಂದ ಸ್ವೀಕರಿಸಿದ್ದು ನನಗೆ ಗೌರವಿಸಿದ್ದಕ್ಕೆ ಚಿರಋಣಿಯಾಗಿದ್ದೇನೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸೋಮಶೇಖರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿ ಹೆಗ್ಗುಂದ ಬಳಿಯ ವನಕಲ್ಲು ಶ್ರೀಮಲ್ಲೇಶ್ವರ ಸ್ವಾಮಿ ಜಾತ್ರಾ ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ `ವನಕಲ್ಲುಶ್ರೀ’ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.ದಿವ್ಯಸಾನಿಧ್ಯ ವಹಿಸಿದ್ದ ಶಿವಗಂಗೆ ಹೊನ್ನಮ್ಮಗವಿ ಮಠಾಧೀಶರಾದ ಶ್ರೀರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿ ಗಳು ಮಾತನಾಡಿ ಮಠವನ್ನು ಧಾರ್ಮಿಕವಾಗಿ ಸಾಂಸ್ಕೃತಿಕ ಮತ್ತು ಶೈಕ್ಷಣ ಕವಾಗಿ ಶ್ರೀಮಂತಗೊಳಿಸಿರುವ ಮಠಾಧೀಶರು ಗ್ರಾಮೀಣ ಜನರ ಒಡನಾಟದೊಂದಿಗೆ ಕಟ್ಟಿಕೊಂಡಿದ್ದು ಅವರ ಶ್ರಮ ಮತ್ತು ಸಾಮಾಜಿಕ ಕಳಕಳಿ ನಿಜಕ್ಕೂ ಸಾರ್ಥಕತೆಯ ದಿಕ್ಕಿನತ್ತ ಸಾಗಿದೆ ಎಂದರು.
ಜಗಜ್ಯೋತಿ ಪ್ರಶಸ್ತಿಯನ್ನು ಆಯುರ್ವೇದ ಸಂಶೋಧಕ ವೈದ್ಯರಾದ ಡಾ.ಬಿ.ನಂಜುಂಡಸ್ವಾಮಿ, ವಿಶ್ವಜ್ಯೋತಿ ಪ್ರಶಸ್ತಿಯನ್ನು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಶರಣಶ್ರೀ ಪ್ರಶಸ್ತಿಯನ್ನು ಲಯನ್ ಡಾ.ಶ್ರೀಸಿಂಗ್ರಿ ಭಾಸ್ಕರ್, ನಿರ್ಮಲಜ್ಯೋತಿ ಪ್ರಶಸ್ತಿಯನ್ನು ಹರ್ಷ ಸಮೂಹ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಅವರಿಗೆ ಪ್ರಧಾನ ಮಾಡಲಾಯಿತು.
ಶ್ರೀಮಠದ ದಶಮಾನೋತ್ಸವಕ್ಕಾಗಿ ‘ವನಕಲ್ಲರಳಿ ಶೂನ್ಯದಿಂದ ಮಾನ್ಯದೆಡೆಗೆ’ ಎಂಬ ಅಭಿನಂದನಾ ಗ್ರಂಥವನ್ನು ಮಾಜಿಸಚಿವ ಹಾಲಿ ಶಾಸಕ ಟಿ.ಬಿ.ಜಯಚಂದ್ರ ಲೋಕಾರ್ಪಣೆಗೊಳಿಸಿದರು. ಶಾಸಕ ಎನ್.ಶ್ರೀನಿವಾಸ್ ಅವರು ಸಿದ್ಧಯೋಗಾನಂದಶ್ರೀ ಕ್ರಿಕೇಟ್ ಕಪ್-2024 ಮತ್ತು ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದರು.
ಶ್ರೀಮಠಾಧೀಶರಾದ ಡಾ.ಬಸವರಮಾನಂದ ಮಹಾಸ್ವಾಮಿಗಳು, ಹೊಸದುರ್ಗ ಶ್ರೀಭಗೀರಥ ಮಹಾಸಂಸ್ಥಾನ ಮಠಾಧೀಶರಾದ ಡಾ.ಪುರುಷೋತ್ತಮಾನಂದ ಮಹಾಸ್ವಾಮೀಜಿ, ಹಿರಿಯೂರು ಮಾಜಿಶಾಸಕಿ ಪೂರ್ಣಿಮಾ ಶ್ರೀನಿವಾಸ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಸೇರಿದಂತೆ ಹಲವರಿದ್ದರು.