ಬೆಂಗಳೂರು : ಇರಾನ್-ಇಸ್ರೇಲ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ಕೊರತೆ ರಾಜಧಾನಿ ಬೆಂಗಳೂರಿನ ಧಾರ್ಮಿಕ ಕೇಂದ್ರಗಳ ಮೇಲೂ ಪರಿಣಾಮ ಬೀರುವಂತಾಗಿದೆ. ಇದರ ಪರಿಣಾಮವಾಗಿ ದೇವಾಲಯಗಳಲ್ಲಿ ಭಕ್ತರಿಗೆ ವಿತರಿಸಲಾಗುತ್ತಿದ್ದ ಅನ್ನಪ್ರಸಾದ ಸೇವೆಯಲ್ಲೂ ವ್ಯತ್ಯಯ ಉಂಟಾಗಿದೆ.
ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ಪ್ರತಿದಿನ ಸಾವಿರಾರು ಭಕ್ತರಿಗೆ ಅನ್ನಪ್ರಸಾದ ವಿತರಿಸುವ ವ್ಯವಸ್ಥೆ ಇದೆ. ಸಾಮಾನ್ಯ ದಿನಗಳಲ್ಲಿ ಸುಮಾರು 3 ಸಾವಿರದಿಂದ 4 ಸಾವಿರ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ವಿಶೇಷವಾಗಿ ಶುಕ್ರವಾರ ಮತ್ತು ಮಂಗಳವಾರದAದು ಭಕ್ತರ ಸಂಖ್ಯೆ ಹೆಚ್ಚಾಗಿ 4 ಸಾವಿರದಿಂದ 5 ಸಾವಿರದವರೆಗೆ ತಲುಪುತ್ತದೆ. ಭಕ್ತರಿಗಾಗಿ ದೇವಾಲಯದಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮೂರು ಹೊತ್ತಿಗೂ ಪ್ರಸಾದ ಸಿದ್ಧಪಡಿಸಲಾಗುತ್ತದೆ.
ಬೆಳಗಿನ ವೇಳೆಯಲ್ಲಿ ಪೊಂಗಲ್, ಪುಳಿಯೋಗರೆ, ರೈಸ್ಬಾತ್ ಮೊದಲಾದವುಗಳನ್ನು ಪ್ರಸಾದವಾಗಿ ತಯಾರಿಸಲಾಗುತ್ತದೆ. ಮಧ್ಯಾಹ್ನ ಅನ್ನ ಹಾಗೂ ಸಾಂಬಾರ್ನ್ನು ಭಕ್ತರಿಗೆ ನೀಡಲಾಗುತ್ತದೆ. ಸಂಜೆ ವೇಳೆಯಲ್ಲೂ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿದಿನ ಈ ಪ್ರಮಾಣದಲ್ಲಿ ಪ್ರಸಾದ ಸಿದ್ಧಪಡಿಸಲು ಕನಿಷ್ಠ ಒಂದು ರಿಂದ ಎರಡು ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳು ಅಗತ್ಯವಾಗುತ್ತವೆ.
ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಪಿಜಿ ಸಿಲಿಂಡರ್ ಪೂರೈಕೆ ಕಡಿಮೆಯಾಗಿರುವುದರಿಂದ ದೇವಸ್ಥಾನ ನಿರ್ವಹಣೆಗೆ ಅಡುಗೆ ವ್ಯವಸ್ಥೆಯನ್ನು ಮುಂದುವರಿಸುವುದು ಕಷ್ಟಕರವಾಗಿದೆ. ದೇವಸ್ಥಾನದಲ್ಲಿ ಸದ್ಯ ಕೇವಲ ನಾಲ್ಕು ವಾಣಿಜ್ಯ ಸಿಲಿಂಡರ್ಗಳು ಮಾತ್ರ ಲಭ್ಯವಿದ್ದು, ಅವುಗಳನ್ನು ಬಳಸಿಕೊಂಡು ಇಂದು ಮತ್ತು ನಾಳೆ ಸಂಜೆವರೆಗೆ ಮಾತ್ರ ಅಡುಗೆ ವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿಯಾಗಿ ಬಂಡೆ ಮಹಾಕಾಳಿ ದೇಗುಲದಲ್ಲೂ ಕೂಡ ಸಿಲಿಂಡರ್ ಅಭಾವ ಎದುರಾಗಿದ್ದು, ಪ್ರತಿದಿನ ಪ್ರಸಾದ ತಯಾರಿಸಲು ನಾಲ್ಕರಿಂದ ಐದು ಸಿಲಿಂಡರ್ ಗಳು ಬೇಕು. ಯುದ್ಧದಿಂದಾಗಿ ಕಮರ್ಷಿಯಲ್ ಸಿಲಿಂಡರ್ ಸಿಗಲ್ಲ ಅಂತಿದ್ದಾರೆ. ಸಿಲಿಂಡರ್ ಸಿಗದಿದ್ದರೆ ಇಂದು ನಾಳೆ ಪ್ರಸಾದ ತಯಾರಿಸಲು ಕಷ್ಟವಾಗುತ್ತದೆ. ಅಡುಗೆ ಅವರಿಗೆ ಸೌದೆ ಒಲೆಸಿದ್ದ ಮಾಡಿಕೊಳ್ಳಲು ಹೇಳಿದ್ದೇವೆ. ಪ್ರತಿದಿನ ಪ್ರಸಾದ ನೀಡುವುದು ದೇವಸ್ಥಾನದ ಪದ್ಧತಿ. ಪ್ರಸಾದ ತಯಾರಿಸಲು ಸಿಲಿಂಡರ್ ಸಿಕ್ಕಿದರೆ ಸಾಕು ಅಂತಿದ್ದಾರೆ ಎಂದು ಬಂಡೆ ಮಹಾಕಾಳಿ ದೇಗುಲದ ಅರ್ಚಕ ಶಶಿಕುಮಾರ್ ಮಾಹಿತಿ ನೀಡಿದರು.
ರಾಜ್ಯದಲ್ಲಿ ದೇವಸ್ಥಾನಗಳಿಗೂ ತಟ್ಟಿದ ಯುದ್ಧದ ಬಿಸಿ | ಭಕ್ತಾದಿಗಳಿಗೆ ಪ್ರಸಾದ ಸೇವೆಯಲ್ಲಿ ವ್ಯತ್ಯಯ



