ಬೆಂಗಳೂರು: ವರ್ತೂರು ಪೊಲೀಸರು ಮನೆ ಕೆಲಸದಾಕೆ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನನ್ನ ಗಮನಕ್ಕೂ ಬಂದಿದೆ. ಪೊಲೀಸ್ ಆಯುಕ್ತರಿಂದ ಇದರ ಬಗ್ಗೆ ವರದಿ ಕೇಳಿದ್ದೇನೆ. ವರದಿ ಬಂದ ಕೂಡಲೇ ಪರಿಶೀಲಿಸಿ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲ್ಲೆ ವಿಚಾರ ನನ್ನ ಗಮನಕ್ಕೂ ಬಂದಿದೆ. ವರದಿ ಬಂದ ಬಳಿಕ ಪರಿಶೀಲಿಸಿ ಪೊಲೀಸರ ವಿರುದ್ಧ ಕ್ರಮ ತಗೋತೀವಿ ಎಂದಿದ್ದಾರೆ. ಅಲ್ಲದೇ ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರವಾಣಿ ಕರೆ ಮಾಡಿದ ಸಚಿವರು, ವರ್ತೂರು ಪ್ರಕರಣ ಕುರಿತು ತುರ್ತು ವರದಿ ಕೊಡುವಂತೆ ಸೂಚನೆ ನೀಡಿದ್ದಾರೆ.


		
		
		
		