ಚಾಮರಾಜನಗರ: ಜಿಲ್ಲೆಯಲ್ಲಿ ಕೈಗೊಂಡಿರುವ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಅಪರ ಮುಖ್ಯ ಚುನಾವಣಾಧಿಕಾರಿಗಳಾದ ಕೂರ್ಮರಾವ್. ಎಂ ಅವರು ಇಂದು ಪರಿಶೀಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ನಡೆದ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಮತದಾರರಪಟ್ಟಿ ಪರಿಷ್ಕರಣಾ ಕಾರ್ಯವನ್ನು ವಿವರವಾಗಿ ಪರಾಮರ್ಶಿಸಿದರು.
ದಿನಾಂಕ 01-01-2024ಕ್ಕೆ ಅರ್ಹತಾ ದಿನಾಂಕನಿಗದಿಪಡಿಸಿ ಭಾವಚಿತ್ರವಿರುವ ಮತದಾರರ ಪಟ್ಟಿವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ಸ್ವೀಕರಿಸ ಲಾಗಿರುವ ಅರ್ಜಿಗಳ ವಿವರ ಪಡೆದ ಅಪರ ಮುಖ್ಯ ಚುನಾವಣಾಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನ ನಿಯಮಗಳ ಅನುಸಾರಅರ್ಜಿಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವಂತೆ ಸೂಚನೆ ನೀಡಿದರು.
ಮತದಾನದಿಂದ ಯಾರು ವಂಚಿತರಾಗಬಾರದು. ಅರ್ಹರು ಮತದಾರರ ಪಟ್ಟಿಯಿಂದ ಹೊರಗೆಉಳಿಯಬಾರದು. ಅರ್ಹರೆಲ್ಲರೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗಬೇಕು. ಈಗಾಗಲೇ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಸ್ವೀಕರಿಸಲಾಗಿರುವ ಮತ್ತು ಬಿಡತಕ್ಕವು, ಸ್ಥಳಾಂತರ ಸೇರಿದಂತೆ ವಿವಿಧ ನಮೂನೆ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು ಎಂದರು.
ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬೇಕು. ಬುಡಕಟ್ಟು ಜನಾಂಗ, ವಿಶೇಷಚೇತನರು, ಲಿಂಗತ್ವ ಅಲ್ಪಸಂಖ್ಯಾತರು ಸಹ ಪೂರ್ಣ ಪ್ರಮಾಣದಲ್ಲಿ ಹೆಸರು ಸೇರ್ಪಡೆಯಾಗಬೇಕು. ಇತರೆ ಯಾವುದೇ ವರ್ಗಗಳ ಜನರು ಮತದಾನದಿಂದ ದೂರ ಉಳಿಯದಂತೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ವಿಶೇಷ ಕ್ರಮ ತೆಗೆದುಕೊಳ್ಳಬೇಕೆಂದು ಅಪರ ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದರು.
ಸ್ವೀಪ್ ಚಟುವಟಿಕೆಗಳನ್ನು ಸಕ್ರಿಯವಾಗಿ ಕೈಗೊಳ್ಳುವ ಮೂಲಕ ಮತದಾರರ ನೋಂದಣಿಗೆಹೆಚ್ಚಿನ ಗಮನ ಹರಿಸಬೇಕು. ಮತದಾನದ ಮಹತ್ವವನ್ನುತಿಳಿಸುವ ಕಾರ್ಯ ಪರಿಣಾಮಕಾರಿಯಾಗಿ ಆಗಬೇಕು. ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್, ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಲ್ಲಿಯೂ ಏರ್ಪಡಿಸಿ ಹೆಚ್ಚಿನ ಅರಿವು ಮೂಡಿಸುವಂತೆ ಅಪರ ಮುಖ್ಯ ಚುನಾವಣಾಧಿಕಾರಿಗಳಾದ ಕೂರ್ಮರಾವ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಜಿಲ್ಲೆಯಲ್ಲಿ ಯುವ ಮತದಾರರ ನೋಂದಣಿ ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳಲಾಗುತ್ತಿದೆ. ಈಗಾಗಲೆ 10,118 ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಿದ್ದಾರೆ. ಡಿಸೆಂಬರ್ 1, 2 ಹಾಗೂ 4ರಂದು ಯುವ ಮತದಾರರ ನೊಂದಣಿಗಾಗಿ ಕಾಲೇಜು ಹಂತದಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಮುತುವರ್ಜಿಯಿಂದ ನಿರ್ವಹಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಚುನಾವಣಾ ತಹಶೀಲ್ದಾರ್ ಅಶೋಕ್, ತಾಲೂಕು ತಹಶೀಲ್ದಾರರಾದ ಈ. ಬಸವರಾಜು, ಮಂಜುಳಾ, ಜಯಪ್ರಕಾಶ್, ಗುರುಪ್ರಸಾದ್, ರಮೇಶ್ಬಾಬು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾ ಧಿಕಾರಿಗಳಾದ ಪೂರ್ಣಿಮಾ, ಪಿ. ಶ್ರೀನಿವಾಸ್, ಉಮೇಶ್, ಹೆಚ್.ಜಿ. ಶ್ರೀನಿವಾಸ್, ರಾಮಲಿಂಗಯ್ಯ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.