ಬೆಂಗಳೂರು: ಕನ್ನಡ ಹಿರಿಯ ಸಾಹಿತಿ, ಖ್ಯಾತ ಪತ್ರಕರ್ತ ಹಾಗೂ ಸಮಾಜ ಸೇವಕ ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ (89) ಅವರು ಇಂದು ಬೆಳಗ್ಗೆ ನಗರದಲ್ಲಿ ನಿಧನರಾದರು.ಕಳೆದ ಕೆಲವು ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ರಾಷ್ಟೋತ್ಥಾನ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾಗಿದ್ದ ರಾಮಸ್ವಾಮಿ ಅವರು ಸಾಹಿತ್ಯ ಪತ್ರಿಕೋದ್ಯಮ ಮತ್ತು ಪರಿಸರ ಹೋರಾಟಗಳಲ್ಲಿ ದಶಕಗಳ ಕಾಲ ತಮ್ಮನ್ನು ತೊಡಗಿಸಿಕೊಂಡಿದ್ದರು.1937ರಲ್ಲಿ ಜನಿಸಿದ ಎಸ್.ಆರ್. ರಾಮಸ್ವಾಮಿ ಅವರು ಕೇವಲ ಸಾಹಿತಿಯಷ್ಟೇ ಅಲ್ಲದೆ, ಕಲಾ ವಿಮರ್ಶಕರು, ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. 50ಕ್ಕೂ ಹೆಚ್ಚು ಕೃತಿಗಳನ್ನು ಹಾಗೂ 2,000ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಅವರು, ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ (1972-79) ಮತ್ತು ದೀರ್ಘಕಾಲದವರೆಗೆ ಉತ್ಥಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಪ್ರತಿಷ್ಠಿತ ಗೋಖಲೆ ಸಾರ್ವಜನಿಕ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ದಶಕಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿದ್ದರು.ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಚಾಮರಾಜಪೇಟೆಯ ಕೆಂಪೇಗೌಡ ನಗರದಲ್ಲಿರುವ ರಾಷ್ಟೋತ್ಥಾನ ಪರಿಷತ್ತಿನ ಕೇಶವಶಿಲ್ಪಾದಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.00 ಗಂಟೆಯವರೆಗೆ ಇಡಲಾಗುತ್ತದೆ. ಮಧ್ಯಾಹ್ನ 12 ಗಂಟೆಯ ನಂತರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯುವುದು.



